ವಿಜಯ್ ದಿವಸ್

"ಪರಮ ವೀರ ಚಕ್ರ ಪಡೆಯಬೇಕೆಂದಿದ್ದೇನೆ ಅದನ್ನು ಕೊಡುವುದು ನೀವೊಬ್ಬರೇ ಅದಕ್ಕಾಗಿ ಸೇನೆ ಸೇರುತ್ತೇನೆ"

Srinivas Rao BV
ಕಾರ್ಗಿಲ್ ಯುದ್ಧದಲ್ಲಿ ಒಬ್ಬೊಬ್ಬ ಯೋಧರದ್ದೂ ಒಂದೊಂದು ಸಾಹಸಗಾಥೆಗಳಿವೆ. ಅವುಗಳನ್ನು ಕೇಳಿದರೆ ಸಾಕು ಮೈನವಿರೇಳುವ ಅನುಭವವಾಗುತ್ತದೆ. ಅಂತಹ ಯೋಧರ ಸಾಲಿನಲ್ಲಿ ಕ್ಯಾಪ್ಟನ್ ಮನೋಜ್ ಪಾಂಡೆ ಸಹ ಒಬ್ಬರು. ಕ್ಯಾಪ್ಟನ್ ಮನೋಜ್ ಪಾಂಡೆ ದೇಶದ ಬಗ್ಗೆ ತಮಗಿದ್ದ ಪ್ರೀತಿಯನ್ನು ಡೈರಿಯೊಂದರಲ್ಲಿ ದಾಖಲಿಸಿದ್ದಾರೆ. 
1975 ರ ಜೂ.25 ರಂದು ಉತ್ತರ ಪ್ರದೇಶದ ಸೀತಾಪುರ್ ಜಿಲ್ಲೆಯಲ್ಲಿ ಜನಿಸಿದ ಮನೋಜ್ ಪಾಂಡೆಗೆ ಬಾಲ್ಯದಿಂದಲೇ ತಾಯಿಯಿಂದ ದೇಶಭಕ್ತರ ಕಥೆಗಳನ್ನು ಕೇಳುವುದೆಂದರೆ  ಅಚ್ಚುಮೆಚ್ಚು, ದೇಶಭಕ್ತರ ಸಾಹಸಗಾಥೆಗಳು, ದೇಶಪ್ರೇಮದ ಕಥೆಗಳನ್ನೇ ಕೇಳಿ ಬೆಳೆದಿದ್ದ ಮನೋಜ್ ಪಾಂಡೆ ಸೇನೆಗೆ ಸೇರಬೇಕಾದರೆ ಸರ್ವೀಸ್ ಸೆಲೆಕ್ಷನ್ ಬೋರ್ಡ್ ನ ಸಂದರ್ಶನದಲ್ಲಿ ಸೇನೆಗೇ ಏಕೆ ಸೇರಬೇಕೆಂದಿರುವಿರಿ ಎಂದು ಪ್ರಶ್ನಿಸುತ್ತಾರೆ. ನೇರವಾಗಿ ಉತ್ತರ ನೀಡಿದ್ದ ಪಾಂಡೆ, ಇಡೀ ದೇಶದಲ್ಲಿ ಪರಮವೀರ ಚಕ್ರ ನೀಡುವುದು ಭಾರತೀಯ ಸೇನೆ ಮಾತ್ರ ಆದ್ದರಿಂದ ಪರಮವೀರ ಚಕ್ರ ಗೆಲ್ಲುವ ಇಚ್ಛೆ ಇದೆ ಹಾಗಾಗಿ ನಾನು ಸೇನೆಗೆ ಸೇರಲು ಬಯಸುತ್ತೇನೆ ಎಂದು ಉತ್ತರ ನೀಡುತ್ತಾರೆ. ಸಂದರ್ಶನದಲ್ಲಿ ಮನೋಜ್ ಪಾಂಡೆ ಅರ್ಹತೆ ಪಡೆಯುವುದಿಲ್ಲ, ಆದರೇನಂತೆ 1/11 ಗೋರ್ಖಾ ರೈಫಲ್ಸ್ ಯುನಿಟ್ ನಿಂದ ಸೇನೆಗೆ ಸೇರುತ್ತಾರೆ. 
ಸೇರಿದ ಕೂಡಲೇ ಮನೋಜ್ ಪಾಂಡೆ ಅವರ ಮೊದಲ ಪೋಸ್ಟಿಂಗ್ ಕಾಶ್ಮೀರ ಕಣಿವೆಯಾಗಿರುತ್ತದೆ. ನಂತರದ ಪೋಸ್ಟಿಂಗ್ ಸಿಯಾಚಿನ್ ಗ್ಲೇಸಿಯರ್ ನಲ್ಲಾಗಿರುತ್ತದೆ. ಹೀಗೆ ಹಿಮವತ್ಪ್ರದೇಶದಲ್ಲಿ ಮೊದಲೆರಡು ಪೋಸ್ಟಿಂಗ್ ನ್ನು ಮುಗಿಸಿದ ಬಳಿಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದ ಮನೋಜ್ ಪಾಂಡೆ ಗ್ಲೇಸಿಯರ್ ನಲ್ಲಿ ಯೋಧರು ಶತ್ರುಗಳೊಂದಿಗೆ ಹೋರಾಡುವುದಕ್ಕಿಂತ ಹವಾಮಾನದೊಂದಿಗೆ ಹೋರಾಡುತ್ತಿರುತ್ತಾರೆ ಎಂದು ಹೇಳಿದ್ದರು. ಆದರೆ ಇಷ್ಟೆಲ್ಲಾ ಪ್ರತಿಕೂಲ ಹವಾಮಾನ ಎದುರಿಸುತ್ತಿದ್ದರೂ ಮನೋಜ್ ಪಾಂಡೆಯ ದೇಶ ರಕ್ಷಣೆಯ ಅದಮ್ಯ ಸಂಕಲ್ಪಕ್ಕೆ ಅಡ್ಡಿ ಉಂಟಾಗಿರಲಿಲ್ಲ. ಕೊನೆಗೆ ಪರಮವೀರ ಚಕ್ರ ಪಡೆಯಬೇಕೆಂದಿದ್ದ ಮನೋಜ್ ಪಾಂಡೆಗೆ ಕಾರ್ಗಿಲ್ ಕದನದಲ್ಲಿ ಪಾಕಿಸ್ತಾನದಿಂದ ದೇಶವನ್ನು ರಕ್ಷಿಸುವ ಅವಕಾಶ ಸಿಗುತ್ತದೆ. ಕಾಶ್ಮೀರದ ಕೊರೆಯುವ ಚಳಿಯಲ್ಲೂ ದೇಶಕ್ಕಾಗಿ ಹೋರಾಡುವ ಮನೋಜ್ ಪಾಂಡೆಯವರ ದೇಶಭಕ್ತಿಯ ಕಿಚ್ಚು ತಣ್ಣಗಾಗುವುದಿಲ್ಲ. ಕೊನೆಗೆ ಮನೋಜ್ ಪಾಂಡೆ ಕಾರ್ಗಿಲ್ ಕದನದಲ್ಲಿ ವೀರಮರಣವನ್ನಪ್ಪುತ್ತಾರೆ. ಪರಮವೀರ ಚಕ್ರ ಪಡೆಯಬೇಕೆಂಬ ಉತ್ಸಾಹ ಹೊಂದಿದ್ದ ಯೋಧನಿಗೆ ಕೊನೆಗೂ ಪರಮವೀರ ಚಕ್ರ ಸಿಗುತ್ತದೆ. ಆದರೆ ಜೀವಂತ ಅಲ್ಲ, ಹುತಾತ್ಮನ ಪಟ್ಟದೊಂದಿಗೇ ಪರಮವೀರ ಚಕ್ರ ಸಿಗುತ್ತದೆ.
SCROLL FOR NEXT