ಕಾರ್ಗಿಲ್ ಕದನ: ಕುತಂತ್ರಿ ಪಾಕ್ ಗೆ ಸೋಲಿನ ಭೀತಿ ಎದುರಾದಾಗ ಅಮೆರಿಕ ನೆನಪಾಯಿತು!
ದೇಶಾದ್ಯಂತ ಇದು ಕಾರ್ಗಿಲ್ ವಿಜಯೋತ್ಸವದ ನಿಮಿತ್ತ ವಿಜಯ್ ದಿವಸ್ ಆಚರಣೆಯಲ್ಲಿ ತೊಡಗಿದ್ದು, ಭಾರತೀಯ ಸೈನಿಕರ ಪರಾಕ್ರಮ ವಿಶ್ವಾದ್ಯಂತ ಮನೆ ಮಾತಾಗಿತ್ತು. ಆದರೆ ಈ ಜಯ ಭಾರತದ ಪಾಲಿಗೆ ಅಷ್ಟು ಸುಲಭವಾಗಿ ಒಲಿದುಬಂದಿರಲಿಲ್ಲ. ಒಂದೆಡೆ ಉಗ್ರರು ಮತ್ತೊಂದೆಡೆ ಪಾಪಿಸ್ತಾನದ ಸೈನಿಕರು ಕಾರ್ಗಿಲ್ ಕಣಿವೆಯನ್ನು ವಶಪಡಿಸಿಕೊಂಡಿದ್ದರು. ಇದಕ್ಕೆ ಪಾಕಿಸ್ತಾನ ಸರ್ಕಾರದ ಕುಮ್ಮಕ್ಕು ಬೇರೆ..ಆದರೆ ಈ ಹಂತದಲ್ಲಿ ಭಾರತ ಇಟ್ಟಿದ್ದ ಪ್ರತಿಯೊಂದು ನಡೆಯೂ ವಿಶ್ವ ಸಮುದಾಯದ ಮೆಚ್ಚುಗೆ ಗಳಿಸಿತ್ತು. ಅದು ಎಷ್ಟರ ಮಟ್ಟಿಗೆ ಎಂದರೆ ಸ್ವತಃ ಅಂದಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೆ ಕರೆ ಮಾಡಿ ಯುದ್ಧ ನಿಲ್ಲಿಸುವಂತೆಯೂ ಮತ್ತು ತಮ್ಮ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಕೇಳಿದ್ದರು. ಆದರೆ ಅವರ ಕರೆಗೆ ಕೇಳಿಯೂ ಕೇಳದ ರೀತಿಯಲ್ಲಿ ನವಾಜ್ ಷರೀಫ್ ಉತ್ತರಿಸುವ ಮೂಲಕ ಸೇನೆ ಹಿಂಪಡೆಯಲು ಪರೋಕ್ಷ ಹಿಂದೇಟು ಹಾಕಿದರು. ಇಜಕ್ಕೂ ಮೊದಲು ಕ್ಲಿಂಟನ್ ಇಸ್ಲಾಮಾಬಾದ್ ಗೆ ಪತ್ರ ಬರೆದಿದ್ದರಾದರೂ ಇದಕ್ಕೆ ಸೂಕ್ತ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ನೇರವಾಗಿ
ಷರೀಫ್ ಗೆ ಕರೆ ಮಾಡಿದ್ದರು. ಷರೀಫ್ ಅವರ ಉತ್ತರದಿಂದ ಸಮಾಧಾನಗೊಳ್ಳದ ಕ್ಲಿಂಟನ್ ಅಂದು ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದರು ಎನ್ನಲಾಗಿದೆ. ಇದಕ್ಕೂ ಮೊದಲು ಅಂದರೆ ಪಾಕ್ ಸೇನೆ ಕಾರ್ಗಿಲ್ ವಶಪಡಿಸಿಕೊಂಡ ಕೆಲವೇ ದಿನಗಳಲ್ಲಿ ಅಂದಿನ ಭಾರತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು, ಮೇ 24 ರಂದು ಷರೀಫ್ ಗೆ ಕರೆ ಮಾಡಿ ನಮ್ಮ ಗಡಿಯ ರಕ್ಷಣೆಗಾಗಿ ನಾವು ಎಲ್ಲ ಬಗೆಯ ಸಿದ್ಧತೆಗಳನ್ನು ಮತ್ತು ಕಾರ್ಯಾಚರಣೆಗಳನ್ನು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಇದಾದ ಬಳಿಕ ಇದೇ ಮೇ 28 ವಾಜಪೇಯಿ ಅವರಿಗೆ ಕರೆ ಮಾಡಿದ್ದ ಷರೀಫ್ ಸಂಧಾನ ಮಾತುಕತೆಗಾಗಿ ವಿದೇಶಾಂಗ ಸಚಿವ ಸರ್ತಾಜ್ ಎಜೀಜ್ ಅವರನ್ನು ಕಳುಹಿಸುವುದಾಗಿ ಹೇಳಿದರು. ಆದರೆ ಇದಕ್ಕೆ ಭಾರತ ಒಪ್ಪಿತ್ತಾದರೂ ಕೇವಲ ಪಾಕಿಸ್ತಾನ ತನ್ನ ಸೇನೆಯನ್ನು ಹಿಂಪಡೆಯುವುದರ ಕುರಿತು ಮಾತ್ರ ಚರ್ಚೆ ನಡೆಯಬೇಕು ಎಂದು ಹೇಳಿದ್ದರು. ಅಷ್ಟು ಹೊತ್ತಿಗಾಗಲೇ ಯುದ್ಧ ಆರಂಭವಾಗಿತ್ತು. ಸೈನಿಕರಲ್ಲಿ ಚೈತನ್ಯ ತುಂಬ ಸಲುವಾಗಿ ನೇರವಾಗಿ ವಾಜಪೇಯಿ ಅವರೇ ಯುದ್ಧ ನಡೆಯುತ್ತಿದ್ದ ಕಾರ್ಗಿಲ್ ಗೆ ತೆರಳಿದ್ದರು. ಅಲ್ಲಿ ಸೈನಿಕರೊಂದಿಗೆ ಸಭೆ ನಡೆಸುತ್ತಿದ್ದ ಸಂದರ್ಭದಲ್ಲೇ ಪಾಕಿಸ್ತಾನ ಶೆಲ್ ದಾಳಿ ಮಾಡಿತ್ತು. ಪಾಕಿಸ್ತಾನ ಸಿಡಿಸಿದ್ದೆ ಶೆಲ್ ಗಳು ವಾಜಪೇಯಿ ಅವರಿದ್ದ ಪ್ರದೇಶದಿಂದ ಕೇವಲ 2 ಕಿ.ಮೀ ಅಂತರದಲ್ಲಿ ಬಿದ್ದು ಸ್ಫೋಟಗೊಂಡಿದ್ದವು. ಇದರಿಂದ ಯುದ್ಧ ಮತ್ತಷ್ಟು ತಾರಕಕ್ಕೇರಿತ್ತು. ಜೂನ್ 13ರಂದು ಮತ್ತೆ ಪಾಜಪೇಯಿಗೆ ಕರೆ ಮಾಡಿದ್ದ ಷರೀಫ್ ಶೆಲ್ ದಾಳಿಗೆ ಕ್ಷಮೆ ಕೋರಿದ್ದರು. ಅಂತೆಯೇ ಸಂಧಾನ ಚರ್ಚೆ ಮುಂದುವರೆಸೋಣ ಎಂದು ಹೇಳಿದ್ದರು. ಆದರೆ ಷರೀಫ್ ಮಾತನ್ನು ನಂಬದ ವಾಜಪೇಯಿ ಅದೇ ಧಾಟಿಯಲ್ಲಿ ಉತ್ತರಿಸಿ ಸೈನಿಕರನ್ನು ಹಿಂಪಡೆದುಕೊಳ್ಳದ ಹೊರತು ಯಾವುದೇ ಸಂಧಾನ ಇಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದರು.
ಇದರ ಮಾರನೇ ದಿನವೇ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ವಾಜಪೇಯಿ ಅವರಿಗೆ ಕರೆ ಮಾಡಿ ಭಾರತದ ತಾಳ್ಮೆಯನ್ನು ಕೊಂಡಾಡಿದರು. ಅಂತೆಯೇ ಭಾರತದ ನಿಲುವು ಸ್ಪಷ್ಟಪಡಿಸಿಕೊಂಡರು. ಜೂನ್ 15ರಂದು ಪಾಕಿಸ್ತಾನದ ಪ್ರಧಾನಿ ಷರೀಫ್ ಕರೆ ಮಾಡಿದ್ದ ಕ್ಲಿಂಟನ್ ಕೂಡಲೇ ಪಾಕ್ ಸೇನೆಯನ್ನು ಭಾರತೀಯ ಗಡಿಯಿಂದ ವಾಪಸ್ ಕರೆಸಿಕೊಳ್ಳುವಂತೆ ತಾಕೀತು ಮಾಡಿದ್ದರು. ಇತ್ತ ಪಾಕಿಸ್ತಾನದಂತೆ ಭಾರತ ಯಾವುದೇ ತಪ್ಪು ನಿರ್ಧಾರ ಕೈಗೊಂಡಿದ್ದರೂ ಭಾರತ ವಿಶ್ವ ಸಮುದಾಯದ ಎದುರು ಕೆಂಗಣ್ಣಿಗೆ ಗುರಿಯಾಗಬೇಕಿತ್ತು. ಹೀಗಾಗಿ ಅಂದು ಚಾಣಾಕ್ಷತನ ತೋರಿದ ಭಾರತೀಯ ಅಧಿಕಾರಿಗಳು ಸತತ ಸಭೆ ಮತ್ತು ಗಡಿ ರಕ್ಷಿಸಿಕೊಳ್ಳುನ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡರು. ವಿದೇಶಾಂಗ ಸಚಿವರಾಗಿದ್ದ ಜಸ್ವಂತ್ ಸಿಂಗ್ ಅವರು ಸತತ ಸಭೆಗಳನ್ನು ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದರು. ಅಂತೆಯೇ ಅಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿಯಾಗಿದ್ದ ಕೆ ರಘುನಾಥ್ ಮತ್ತು ಅವರ ತಂಡ ವಿಶ್ವ ಸಮುದಾಯದ ಎದುರು ಭಾರತಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಕೆಟ್ಟ ಅಭಿಪ್ರಾಯ ಮೂಡದಂತೆ ನೋಡಿಕೊಂಡರು. ಇದೇ ಕಾರಣಕ್ಕೆ ಅಂದು ಅಮೆರಿಕ ಭಾರತದ ಪರವಾಗಿ ನಿಂತಿತ್ತು. ಪ್ರಮುಖವಾಗಿ ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿದ್ದ ಬ್ರಿಜೇಶ್ ಮಿಶ್ರಾ ಅವರು ಹಗಲು ರಾತ್ರಿ ಎನ್ನದೇ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದರು. ಕಾರ್ಗಿಲ್ ಯುದ್ಧದ ಸಂಬಂಧ ಭಾರತ ನಡೆ ಸರಿಯಾದುದೇ ಎಂಬುದನ್ನು ವಿಶ್ವಕ್ಕೆ ಮನಮುಟ್ಟುವಂತೆ ಸಾರಿದ್ದರು.
ವಿಶ್ವ ಸಮುದಾಯ ಭಾರತದ ಬೆನ್ನಿಗೆ ನಿಲ್ಲುವುದರೊಂದಿಗೆ ಯುದ್ಧ ಕಾರ್ಗಿಲ್ ಗೆ ಸೀಮಿತವಾಗಿತ್ತು. ಇಲ್ಲವಾದಲ್ಲಿ ಪಾಕಿಸ್ತಾನ ಬೇರೆ ಬೇರೆ ಗಡಿಗಳಲ್ಲೂ ತನ್ನ ಬಾಲ ಬಿಚ್ಚುವ ಅಪಾಯವಿತ್ತು. ಆದರೆ ವಿಶ್ವ ಸಮುದಾಯದ ಅದರೆ ಅಂದು ಪಾಕಿಸ್ತಾನ ಭಾರತದ ಚಾಣಾಕ್ಷ ನಡೆಯಿಂದಾಗಿ ತಲೆಬಾಗಿತ್ತು. ಕಾರ್ಗಿಲ್ ಕಣಿವೆಯಲ್ಲಿ ಅಡಗಿ ಕುಳಿತಿರುವ ಪಾಕಿಸ್ತಾನಿ ಸೈನಿಕರಿಗೆ ಶಸ್ತ್ರಾಸ್ತ್ರ ಪೂರೈಕೆ ತಡೆದರೆ ಖಂಡಿತಾ ಕಾರ್ಗಿಲ್ ಮರಳಿ ಭಾರತದ ವಶಕ್ಕೆ ಸಿಗುತ್ತದೆ ಎಂಬ ಯೋಜನೆಯೊಂದಿಗೆ ಭಾರತ ಯುದ್ಧಕ್ಕೆ ಇಳಿದಿತ್ತು. ಹೀಗಾಗಿ ಪಾಕಿಸ್ತಾನ ಸೈನಿಕರಿಗೆ ಹಾಗೂ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆಗೆ ನೆರವಾಗುತ್ತಿದ್ದ ರಸ್ತೆ ಮತ್ತು ದಾಸ್ತಾನು ಕೇಂದ್ರಗಳನ್ನು ಭಾರತೀಯ ಸೈನಿಕರ ಒಂದು ತಂಡ ಅಪ್ರತಿಮ ವೀರಾವೇಶದಿಂದ ಧ್ವಂಸ ಮಾಡಿದ್ದರು.