ಬ್ಯಾಚುಲರ್ಸ್ ಮನೆ ಎಂದರೆ ಅವ್ಯವಸ್ಥೆಯ ಆಗರ. ಅಲ್ಲಿ ಅಂದಚೆಂದವೆಲ್ಲ ಮಂಗಮಾಯ. ಹಾಗಾಗಿ, ವಿದ್ಯಾರ್ಥಿಗಳಿಗೆ, ಒಬ್ಬಂಟಿಗಳಿಗೆ ಮನೆ, ರೂಮ್ ಬಾಡಿಗೆ ನೀಡಲು ಅನೇಕರು ಹಿಂಜರಿಯುತ್ತಾರೆ. ಒಂದು ವೇಳೆ ಒಪ್ಪಿದರೂ ನೂರೆಂಟು ಕರಾರು, ಸ್ವಚ್ಛತೆ ಕುರಿತು ತುಸು ಹೆಚ್ಚಾಗಿಯೇ ಷರತ್ತು ವಿಧಿಸಿ ಬಾಡಿಗೆಗೆ ನೀಡುತ್ತಾರೆ.
ವ್ಯಾಸಂಗಕ್ಕಾಗಿ, ಕೆಲಸಕ್ಕಾಗಿ ಅಥವಾ ಕೆಲಸ ಹುಡುಕುವುದಕ್ಕಾಗಿ ಬರುವ ಈ ಬ್ಯಾಚುಲರ್ಗಳಿಗೆ ತಾವು ನೆಲೆ ನಿಂತ ಮನೆ ಮೇಲೆ ಅಷ್ಟೇನೂ ಆರೈಕೆಯ ಪ್ರೀತಿ ಇರುವುದಿಲ್ಲ. ಅವರಿಗೆ ಕೆಲಸ ಸಿಕ್ಕಿತೆಂದುಕೊಳ್ಳಿ, ಆ ಸಂಬಳದಲ್ಲಿ ಬಾಡಿಗೆ ಮನೆ, ರೂಮಿನ ಅಂದಚೆಂದ ಶೃಂಗರಿಸುವುದಿರಲಿ, ಕನಿಷ್ಠ ಇರುವ ಅಂದ ಉಳಿಸಿಕೊಳ್ಳುವದೂ ಕಷ್ಟಸಾಧ್ಯ. ಆದರೆ, ಒಂಚೂರು ಮನಸ್ಸು ಮಾಡಿದರೆ ಇರುವ ಮನೆಯನ್ನೇ ಚೆಂದವಾಗಿಟ್ಟುಕೊಳ್ಳಬಹುದು. ಇದಕ್ಕೆ ಬೇಕಿರುವುದು ಹಣ ಅಥವಾ ಹೂಡಿಕೆಯಲ್ಲ; ಒಂದಿಷ್ಟು ಸುಂದರ ಕಲ್ಪನೆ, ಮತ್ತೊಂದಿಷ್ಟು ಶ್ರಮ ಅಷ್ಟೇ.
ಬಹುತೇಕ ಬ್ಯಾಚುಲರ್ಗಳು ತಾವು ಮಾತ್ರ ತುಂಬಾ ಶುಚಿಯಾಗಿರುತ್ತಾರೆ. ಮನೆಯಲ್ಲಿ ಮಾತ್ರ ಅಶುಚಿತ್ವ. ಇಂಥವರಿಗೆ ಮನೆ ಶುಚಿ ಎಂದರೆ ಅಲರ್ಜಿ. ವಸ್ತುಗಳು ಬಿದ್ದಲ್ಲೇ ಇದ್ದರೂ ಅವು ನೆನಪಿಗೆ ಬರುವುದು ಅವರಿಗೆ ಮತ್ತೆ ಅಗತ್ಯ ಕಂಡಾಗ ಮಾತ್ರ. ಹಾಗಾಗಿ, ಮೊದಲು ಅನಗತ್ಯ ವಸ್ತುಗಳಿಗೆ ಗೇಟ್ಪಾಸ್ ನೀಡಿ.
ಮನೆಯನ್ನು ಮತ್ತಷ್ಟು ಅಸ್ತವ್ಯಸ್ತ ಕಾಣುವಂತೆ ಮಾಡುವ ದಪ್ಪ ಮಾದರಿಯ ಕುಷನ್, ಕರ್ಟನ್ಗಳ ಬಳಕೆ ವಿದ್ಯಾರ್ಥಿ ಬ್ಯಾಚುಲರ್ಸ್ ರೂಮ್ಗಳಲ್ಲಿ ಬೇಡ.
ಹೆಚ್ಚು ಒಳ ಕಪಾಟು ನಿರ್ಮಿಸಿದ್ದರೆ ಅದರಲ್ಲಿ ಅನೇಕ ವಸ್ತುಗಳನ್ನು ಚೊಕ್ಕವಾಗಿ ಜೋಡಿಸಿಡದಿದ್ದರೂ, ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಹರಡುವುದನ್ನು ತಪ್ಪಿಸಬಹುದು. ಕಪಾಟು, ಶೆಲ್ಫ್ಗಳಿದ್ದರೆ ಅದರಲ್ಲಿ ಪುಸ್ತಕ, ಬಟ್ಟೆ ಮತ್ತಿತರ ವಸ್ತುಗಳನ್ನು ಸುಲಭವಾಗಿ ಜೋಡಿಸಿಡಬಹುದು. ಜೊತೆಗೆ, ಕಲೆ ಮತ್ತು ವಿನ್ಯಾಸ ನಿಮ್ಮ ಪುಟ್ಟ ಕೋಣೆಯ ನೋಟ ಅದ್ಭುತಗೊಳಿಸುತ್ತದೆ. ಹಾಗಾಗಿ, ಅಂಥ ನೋಟಕ್ಕೆ ಆದ್ಯತೆ ಇರಲಿ.
ರೂಮಿನೊಳಗೆ ಚೆನ್ನಾಗಿ ಗಾಳಿ, ಬೆಳಕು ಬರುವಂತಿರಲಿ. ವ್ಯಾಸಂಗ, ಲ್ಯಾಪ್ಟಾಪ್ ಮತ್ತು ಟಿವಿ ಎಲ್ಲದಕ್ಕೂ ಒಂದೆರಡು ಮೇಜು ಕುರ್ಚಿಗಳಿದ್ದರೆ ಸಾಕು. ಅನಗತ್ಯ ಪಿಠೋಪಕರಣಗಳ ಗುಡ್ಡೆ ಬೇಡ.
ಬಾತ್ರೂಮ್ ಬಳಕೆಯ ಕ್ಲೀನಿಂಗ್ ಲಿಕ್ವಿಡ್ ಬಾಟಲ್, ಶಾಂಪೂ, ಸೋಪ್, ಡಿಟರ್ಜೆಂಟ್ಗಳನ್ನು ಎಲ್ಲೆಂದರಲ್ಲಿ ಪ್ರದರ್ಶನಕ್ಕಿಡದೆ, ಅದಕ್ಕಾಗಿ ಬಾತ್ರೂಮಿನಲ್ಲೇ ತುಸು ಜಾಗ ಕಲ್ಪಿಸಿ.
ಸಾಧ್ಯವಾದರೆ ನೆಲಹಾಸು ಹಾಕಿ. ಇದರಿಂದ ನೆಲವನ್ನು ಒರೆಸುವ, ಕಸ ಗುಡಿಸುವ ಕೆಲಸ ಕಡಿಮೆ ಆಗುತ್ತದೆ.
ಬ್ಯಾಚುಲರ್ಗಳಿಗೆ ಉಂಡಿದ್ದೇ ಊಟ, ಮಲಗಿದ್ದೇ ಮನೆ. ಕೆಲವರು ಆಗೀಗ ಅಡುಗೆ ಮಾಡಿಕೊಳ್ಳುವ ರೂಢಿ ಬೆಳೆಸಿಕೊಂಡಿರುತ್ತಾರೆ. ಅನಗತ್ಯ ಪಾತ್ರೆಗಳನ್ನು ತಂದು ಮನೆ ತುಂಬಿಸಬೇಡಿ. ಇದರಿಂದ ಹಣ, ಅಂದ ಎರಡೂ ಹಾಳು.
ಊಟದ ತಟ್ಟೆ ತೊಳೆಯಲು ಸೋಮಾರಿತನ ಪ್ರದರ್ಶಿಸುವ ಯುವಕರು, ಮನೆ ಸ್ವಚ್ಛವಾಗಿಡುವುದು ಕನಸಿನ ಮಾತು. ಗೋಡೆಗೆ ತೀರಾ ಕಣ್ಣಿಗೆ ರಾಚುವ ಗಾಢ ಬಣ್ಣ ಹಚ್ಚುವ ಬದಲು, ಕಲೆಗಳಾದರೂ ಅಷ್ಟಾಗಿ ಕಾಣಿಸಿದ ಬಣ್ಣ ಹಚ್ಚುವುದು ಸೂಕ್ತ.
ಬ್ಯಾಚುಲರ್ಗಳ ಮನೆ ಅಂದಮೇಲೆ ಅಲ್ಲಿ ಸ್ವಚ್ಛತೆ ಮಾರು ದೂರ. ನೆಲಕ್ಕೆ ಮಾರ್ಬಲ್, ಮೊಸಾಯಿಕ್ ಹಾಕಿಸುವುದು ಸ್ವಚ್ಛತೆ ಹಾಗೂ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಇದು ನೀರು ಬಿದ್ದರೂ ಕುಡಿದು ಒಳಗೆ ಸೆಳೆದಿಡುವುದರಿಂದ ಅಷ್ಟಾಗಿ ಜಾರುವುದಿಲ್ಲ. ನೀರು ಬಿದ್ದರೂ ತೇವ ಉಂಟಾಗದು. ಬ್ಯಾಚುಲರ್ಗಳ ರೂಮಿಗೆ ಇದು ಹೇಳಿ ಮಾಡಿಸಿದ್ದು ಮತ್ತು ಅಂದವೂ ಇಮ್ಮಡಿಗೊಳ್ಳುತ್ತದೆ.
-ಗಣೇಶ್ ಕಮ್ಲಾಪುರ