ಪುಟ್ಟ ಹುಡುಗಿ ಮನೆ ಮುಂದೆ ಕುಳಿತು ಏನನ್ನೋ ಬರೆಯುತ್ತಿದ್ದಳು. ಅವಳ ಅಮ್ಮ ಅದನ್ನೇ ದಿಟ್ಟಿಸುತ್ತಿದ್ದರು. ಆ ಹುಡುಗಿ ಬರೆಯುತ್ತಿದ್ದುದು ಕಾಪಿ ರೈಟಿಂಗ್. ಇದ್ದಕ್ಕಿದ್ದಂತೆ ಆ ಮಗುವಿನ ತಾಯಿ ರುದ್ರಿಯಾದಳು. ಬಾಲೆಗೆ ತದುಕಿದರು. ಮಿಸ್ಸು ಮೊದಲೇ ಸರಿಯಾಗಿ ಬರೆದಿಲ್ಲ ಅಂತ ಕಾಟ್ ಮಾಡಿ ಮತ್ತೆ ಬರ್ಕೊಂಡು ಬಾ ಅಂದಿದ್ದಾರೆ. ಈಗ್ಲೂ ಸರಿಯಾಗಿ ಬರೆಯದೇ ಕಳ್ಳಾಟ ಆಡ್ತಿದೀಯಾ ಅಂತ ಪುಟ್ಟ ಹುಡುಗಿಗೆ ಅಮ್ಮ ಗದರಿಸಿದರು.
ಅಮ್ಮಾ... ನಿದ್ದೆ ಬರ್ತಿದ್ಯಮ್ಮ. ಈಗ ನಿದ್ದೆ ಮಾಡಿ ಆಮೇಲೆ ಬರಿತೀನಿ ಅಂದ ಆ ಹುಡುಗಿಗೆ ಬೈದು ಮೊದ್ಲು ಕಾಪಿ ರೈಟಿಂಗ್ ಪೂರ್ತಿ ಬರೆದು ಮುಗಿಸಿ ಆಮೇಲೆ ಬೇಕಾದ್ರೆ ಬಿದ್ಕೊ ಅಂತ ಆಜ್ಞಾಪಿಸಿದರು. ಇದು ಕೇವಲ ಒಂದು ನಿದರ್ಶನವಷ್ಟೇ. ಇಂಥ ತಾಯಂದಿರ ಸಂಖ್ಯೆ ದೊಡ್ಡದಿದೆ. ಮಕ್ಕಳು ಸದಾ ಓದಬೇಕು, ಓದಿ ರ್ಯಾಂಕ್ ಗಳಿಸಬೇಕು, ಅದನ್ನು ತಾನು ಎಲ್ಲರ ಬಳಿಯೂ ಹೇಳಿಕೊಂಡು ಹೆಮ್ಮೆ ಪಡಬೇಕೆಂಬ ಧೋರಣೆ ತಳೆದಿರುವ ತಾಯಂದಿರು ಅತಿರೇಕದಿಂದ ವರ್ತಿಸುವುದು ಮಾಮೂಲು. ಯಾವುದೋ ಪ್ರತಿಷ್ಠಿತ ಶಾಲೆಗೆ ಮಗುವನ್ನು ಸೇರಿಸಿ, ತಾವು ಕಟ್ಟಿರುವ ಡೊನೇಷನ್‌ಗೆ ಪ್ರತಿಯಾಗಿ ಮಕ್ಕಳು ಚೆನ್ನಾಗಿ ಓದಿ, ಮುಂದೆ ಡಾಕ್ಟರ್ ಅಥವಾ ಎಂಜಿನಿಯರ್ ಆಗಬೇಕೆಂಬ ನಿಲುವು ಈ ಜಮಾನದ ನಗರವಾಸಿ ಪೋಷಕರದ್ದು.
ಸಾಲದ್ದಕ್ಕೆ ಅಕ್ಕ ಪಕ್ಕದ ಮನೆಯ ಅಥವಾ ಸ್ನೇಹಿತರ ಮಕ್ಕಳಿಗಿಂತ ತಮ್ಮ ಮಕ್ಕಳು ಹೆಚ್ಚು ಅಂಕ ಗಳಿಸಲೇಬೇಕೆಂಬ ಹಪಾಹಪಿಯೂ ಅವರಲ್ಲಿರುತ್ತದೆ. ಮಕ್ಕಳು ಮಾರ್ಕ್ಸ್ ರೇಸ್‌ನಲ್ಲಿ ಹಿಂದೆ ಬಿದ್ದರೆ, ಆಟಕ್ಕೆ ನಿರ್ಬಂಧ. ಆ ವೇಳೆ ಮಕ್ಕಳನ್ನು ಮನೆಯಲ್ಲೇ ಕೂರಿಸಿ ಓದಿಸುತ್ತಾರೆ.
ಪುಟ್ಟ ಪುಟ್ಟ ಮಕ್ಕಳನ್ನು ಟ್ಯೂಷನ್‌ಗೆ ಸೇರಿಸುವ ಪ್ರವೃತ್ತಿ ಇತ್ತೀಚೆಗಂತೂ ಸಿಕ್ಕಾಪಟ್ಟೆ ಹೆಚ್ಚು. ಮಕ್ಕಳನ್ನು ಟ್ಯೂಷನ್‌ಗೆ ಕಳುಹಿಸುತ್ತಿರುವ ಸಂಗತಿಯನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ತಂದೆ-ತಾಯಿಗಳೂ ಇದ್ದಾರೆ. ಅಂಗಳದಲ್ಲಿ ಆಡಬೇಕಿದ್ದ ಮಕ್ಕಳು ಮನೆಪಾಠದ ಗುಮ್ಮನಿಗೆ ಬಲಿಪಶುವಾಗುತ್ತಿದ್ದಾರೆ.
ಬೇಸಿಗೆ ರಜೆಯಲ್ಲೂ ಅವರ ಪಾಡಿಗೆ ಅವರು ಆಡಿಕೊಂಡಿರಲು ಬಿಡದ ಪೋಷಕರು ದಿನಾ ಸ್ವಲ್ಪ ಓದು, ಇಲ್ಲಾಂದ್ರೆ ಹಿಂದೆ ಕಲಿತಿದ್ದನ್ನೆಲ್ಲ ಮರೆತುಬಿಡ್ತೀಯ ಅಂತ ಗದರಿಸಿ ರಜೆಯಲ್ಲೂ ಕೈಯಲ್ಲಿ ಬುಕ್ ಹಿಡಿಯುವಂತೆ ಪೀಡಿಸುತ್ತಾರೆ. ಇನ್ನು ಕೆಲವು ಪೋಷಕರಿಗೆ ಮಕ್ಕಳು ಸಕಲಕಲಾವಲ್ಲಭರಾಗಬೇಕೆಂಬ ಕನಸು. ಅಂಥವರ ಕನಸಿಗೆ ರಿಯಾಲಿಟಿ ಶೋಗಳು ಬಣ್ಣ ಹಚ್ಚುತ್ತಿವೆ. ಆ ಕಾರಣಕ್ಕಾಗಿ ಮ್ಯೂಸಿಕ್, ಡ್ಯಾನ್ಸ್ ಕ್ಲಾಸ್ ಹಾಳುಮೂಳು ಕ್ಲಾಸ್‌ಗಳಿಗೆ ಮಕ್ಕಳಲ್ಲಿ ಒಲವಿಲ್ಲದಿದ್ದರೂ ಒತ್ತಾಯ ಮಾಡಿ ಸೇರಿಸುತ್ತಾರೆ.
ಹೀಗೆ ಮಕ್ಕಳ ಮೇಲೆ ಒತ್ತಡ ಹೇರುವವರನ್ನು ನೀವು ಮಾಡುತ್ತಿರುವುದು ಸರಿಯೇ? ಮಕ್ಕಳು ಅವರ ಪಾಡಿಗೆ ಅವರು ಆಡಿಕೊಂಡು ಬೆಳೆಯಲು ಬಿಡಬೇಕಲ್ಲವೇ? ಎಂದು ಪ್ರಶ್ನಿಸಿದರೆ, ಏನ್ಮಾಡೋದು ಇದು ಕಾಂಪಿಟೀಟಿವ್ ವರ್ಲ್ಡ್. ಸ್ವಲ್ಪ ಯಾಮಾರಿದ್ರೂ ನಮ್ಮ ಮಕ್ಕಳು ಸ್ಪರ್ಧೆಯಲ್ಲಿ ಹಿಂದೆ ಬೀಳ್ತಾರೆ ಅಂತ ನಮ್ಮ ಬಾಯಿ ಮುಚ್ಚಿಸಲೆತ್ನಿಸುತ್ತಾರೆ. ಮಕ್ಕಳು ಮುಕ್ತ ವಾತಾವರಣದಲ್ಲಿ ಬೆಳೆಯಬೇಕು. ಪೋಷಕರು ಪ್ರತಿಷ್ಠೆಗೆ ಮಕ್ಕಳ ಬಾಲ್ಯದ ಸಂಭ್ರಮಗಳನ್ನು ಕಸಿಯಬಾರದು. ಪೂರ್ತಿ ಫ್ರೀಯಾಗಿ ಬಿಟ್ರೆ ಅವರು ಹಾಳಾಗೋಗ್ತಾರೆ ಅನ್ನುವ ನಿಲುವಿಗೆ ಸಂಪೂರ್ಣವಾಗಿ ಅಂಟಿಕೊಳ್ಳದೆ ಅವರಿಷ್ಟದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಬಿಡಿ. ಅಮ್ಮಾ ಹೊಡಿಬೇಡಮ್ಮ... ಅಂತ ಗೋಗರೆಯುವ ಮಗುವಿನ ಒಡಲಾಳದ ನೋವು ಅರಿಯಲು ಯತ್ನಿಸುವ ವ್ಯವಧಾನವನ್ನು ತಾಯಂದಿರು ರೂಢಿಸಿಕೊಳ್ಳಬೇಕಿದೆ.
ಎಚ್.ಕೆ. ಶರತ್