ನಿನ್ನ ಬರುವಿಕೆಯಿಂದ ಸಂಭ್ರಮ, ಪುಳಕ, ಜಗತ್ತನ್ನೇ ಗೆದ್ದಂಥ ಹೆಮ್ಮೆ, ಖುಷಿ, ಜತೆಗೊಂದು ಹಿಡಿ ಆತಂಕ ಎಲ್ಲ ಕೊಡಮಾಡಿದ ನಿನ್ನ ಜತೆ ತುಂಬಾ ಮಾತಾಡಬೇಕು ಅನಿಸಿತು ಕಂದಾ... ಮನದಲ್ಲಿ ಮಲ್ಲಿಗೆ ಅರಳಿದೆ. ಮನೆ ತುಂಬಾ ಅದರ ಘಮ. ನನ್ನೊಳಗೆ ನೀ ಕುಡಿಯೊಡೆದ ದಿನವೇ ತಂದಿಟ್ಟ ಕಾಲ್ಗೆಜ್ಜೆ ಹಾಕಿಕೊಂಡು ನೀನು ಝಲ್ಲೆನಿಸಿಕೊಂಡು ಅಂಬೆಗಾಲಿಕ್ಕುವ ಚಿತ್ರ ನಮ್ಮೆದುರು. ನೀನು ನಮ್ಮ ಬಹುದಿನಗಳ ನಿರೀಕ್ಷೆ ಮಗಳೇ.
ಪುಟ್ಟೂ ನಿಜ ಹೇಳಲಾ? ನಿನ್ನನ್ನು ಹೇಗೆಲ್ಲ ಕುಣಿಸಿ ನಲಿಸುವುದೋ ಗೊತ್ತಾಗ್ತಾ ಇಲ್ಲ. ಎಲ್ಲ ಅಯೋವುಯ. ಅದರ ನಡುವಲ್ಲೂ ಎಷ್ಟೊಂದು ಕನಸುಗಳು ಚಿಗುರಿವೆ ಗೊತ್ತಾ? ನೀನು ಬಂದ ಕ್ಷಣದಿಂದ ನಮ್ಮನೆ ತುಂಬುವ ಸಡಗರ ಇಲ್ಲೇ ಠಿಕಾಣಿ ಹೂಡುತ್ತದೆ. ಬೇಸರ ಇರೋದೇ ಇಲ್ಲ. ಬೇಸರದ ಬೇಸಿಗೆಗೆ ಬಾಯಾರಿ ಹೋದಾಗ ತುಂಬಿ ಬಂದ ಅಮೃತ ವಾಹಿನಿ ನೀನು. ಮನೆ ತುಂಬ ಅಚ್ಚಾಗುವ ನಿನ್ನ ಪುಟ್ಟ ಪಾದಗಳ ಗುರುತು ಅಡಿಗಡಿಗೆ ಭರವಸೆಯ ಐಸಿರಿ. ಜೆಟ್ ವೇಗದಲ್ಲಿ ಸಾಗುತ್ತಿದ್ದ ಬದುಕಿನ ಧಾವಂತದ ದಿನಗಳಲ್ಲಿ ಮೆಲ್ಲನೆ ಅಡಿಯಿಟ್ಟ ನೀನು ಬದುಕಿನ ಮೆಗಾ ಧಾರಾವಾಹಿಯಲ್ಲಿ ಸವಿಯಾದೊಂದು ಎಮೋಷನಲ್ ಬ್ರೇಕ್ ಮರೀ, ನೀನು ಹೆಣ್ಣೇ ಆಗಿರುತ್ತೀ ಎಂಬ ದೊಡ್ಡ ನಂಬಿಕೆಯಿಂದ ನಿನ್ನಕ್ಕ ಪ್ರಣತಿ ನಿಂಗೆ ಸ್ವಾತಿ ಅಂತ ಹೆಸರಿಟ್ಟಿದ್ದಾಳೆ! ನಿನ್ನಷ್ಟೇ ಚೆಂದದ ಹೆಸರು.
ನಿನ್ನೆ ಮನೆಗೆ ಬಂದ ಗೆಳತಿ 'ಸೌಮನಸ್ಯಂ ಗರ್ಭಧಾರಣಂ' ಅಂತಂದ್ಲು. ಮರ್ಕಟದಂತೆ ಬದಲಾಗುವ ಹುಚ್ಚು ಹೊಳೆಯಂಥ ಮನಸನ್ನು ಯಾವಾಗ್ಲೂ ಖುಷಿಯಾಗಿ ಶಾಂತವಾಗಿಡೋದಿಕ್ಕೆ ಏನೇನು ಬೇಕೋ ಎಲ್ಲ ಮಾಡ್ತಿದೀನಿ ಬಂಗಾರ. ಯಾವತ್ತೂ ನಿಂಗೆ ನೋವಾಗಬಾರದು. ಕೋಪ ತಾಪಗಳು ನಿನಗೆ ಅಭ್ಯಾಸವಾಗಬಾರದು. ನಿನ್ನ ಬಗ್ಗೆ ಸಾವಿರ ಕನಸಿದೆ ನಂಗೆ. ನೀನು ನಮ್ಮನ್ನು ಮೀರಿ ಬೆಳೆಯಬೇಕು. ಸನ್ನಡತೆಗಳು ಹದವಾಗಿ ಮಿಳಿತವಾದ ಧೀಶಕ್ತಿ ನೀನಾಗಬೇಕು. ಮನುಷ್ಯನ ವಿಕೃತಿಯನ್ನು ಮೀರಿ ಭೂರಮೆ ಪ್ರಕೃತಿಯಲ್ಲಿನ ವಿಸ್ಮಯಗಳಿಗೆ ತೆರೆದುಕೊಳ್ಳುವಂತೆ ನೀನು ರೂಪುಗೊಳ್ಳಬೇಕು... ಮುಂದೊಂದು ದಿನ ಜಗತ್ತೇ ಮೆಚ್ಚುವ ಧೀಮಂತೆ ನೀನಾಗಬೇಕು. ಅದಕ್ಕಾಗೇ ಕ್ಷಣ ಬಿಡುವು ಸಿಕ್ಕರೂ ಅಂಥದ್ದೇ ಪುಸ್ತಕಗಳನ್ನ ಓದ್ತಿದೀನಿ. ಎಲ್ಲ ಹೊತ್ತಿನಲ್ಲೂ ಸುಮಧುರ ಸಂಗೀತ.
ಯಾವ ಭರವಸೆಯೂ ಇಲ್ಲದೇ ಬದುಕು ಬರೀ ಯಾತನೆಯ ಗೂಡಾಗಿದ್ದ ದಿನಗಳಲ್ಲೂ ನಮ್ಮನ್ನು ಜೀವಂತವಾಗಿರಿಸಿದ್ದು ಪ್ರೀತಿ... ಪ್ರೀತಿ ಮತ್ತು ಪ್ರೀತಿ. ಅದೊಂದು ನಮ್ಮ ದಾಂಪತ್ಯದಲ್ಲಿ ಹೊಳೆಯಾಗಿ ಹರಿಯುತ್ತಿತ್ತು. ಅಂಥದ್ದೇ ಯಾವುದೋ ಒಂದು ಅಮೃತ ಘಳಿಗೆಯಲ್ಲಿ ಕುಡಿಯೊಡೆದ ನೀನೂ ಬದುಕನ್ನು ಅಷ್ಟೇ ಪ್ರೀತಿಸಬೇಕು. ಎಂದಿಗೂ ಬತ್ತದ ಜೀವನ್ಮುಖಿ ಕಾರಂಜಿಯಾಗಬೇಕು ಕಂದಾ. ನಿನ್ನ ಪ್ರತಿ ಹೆಜ್ಜೆಗೂ ಅಪ್ಪ-ಅಮ್ಮನ ಒಲವಿನ ಸಾಥ್ ಇದೆ, ಇರುತ್ತದೆ. ಸೋಲನ್ನು ಸೋಲಿಸುವ ದಿಟ್ಟತನ ಹುಟ್ಟಬೇಕು ನಿನ್ನಲ್ಲಿ. ನಿಂಗೊತ್ತಾ ಮಗೂ, ನಿನ್ನ ಹುಟ್ಟೇ ನಿನ್ನ ಮೊದಲ ಗೆಲವು. ಜತೆಗಿದ್ದ ಸಾವಿರಾರು ಜೀವ ಕಣಗಳನ್ನ ಹಿಂದಿಕ್ಕಿ ನೀನೇ ಫಲಿಸಿದ್ದೀ ನೋಡು ಅದು ನಿನ್ನ ವಿಜಯದ ದಾರಿಯಲ್ಲಿನ ಪ್ರಥಮ ಹೆಜ್ಜೆ. ಉಳಿದ ಹೆಜ್ಜೆಗಳಿಗೆ ಬದುಕಿಡೀ ಸಮಯವಿದೆ ಬಿಡು.
ಇವೆಲ್ಲ ಸಂಭ್ರಮದ ನಡುವೆಯೂ ಭಯ ಕಾಡುತ್ತದೆ. ಹೆರಿಗೆಯೆಂದರೆ ಮರುಹುಟ್ಟು ಅಂತಾರೆ. ನನ್ನ ಒಳ್ಳೆ ಮುದ್ದು ನೀನು ನಂಗೆ ಹೆಚ್ಚು ನೋವು ಕೊಡಲ್ಲ ಅಲ್ವಾ? ನೀ ಬಂದ ಮೇಲೆ ನಿನ್ನನ್ನು ಮುಚ್ಚಟೆಯಿಂದ ಸಾಕುವ ಬಗೆ ಹೇಗೆ? ನಿನಗೆ ಏನೇನು ಕಲಿಸಬೇಕು? ಹೇಗೆ ಕಲಿಸಬೇಕು? ನನಗೆ ಅಮರಕೋಶ ಓದಿಸೋಕೆ ಅಜ್ಜಿ ಇದ್ರು. ನಿನಗೆ ಯಾರು ಓದಿಸ್ತಾರೆ? ಮಹಾಭಾರತ, ರಾಮಾಯಣಗಳು ನಂಗೇ ಪೂರ್ತಿ ಗೊತ್ತಿಲ್ಲ. ಇನ್ನು ನಿನಗೆ ಹೇಗೆ ಹೇಳಲಿ? ರಾಮ ಕೃಷ್ಣರ ಜತೆಗೆ ಸುಭಾಸ, ಭಗತರೂ, ಚೆನ್ನಮ್ಮ ಹೊನ್ನಮ್ಮರೂ ನಿನ್ನೆದೆಗೆ ಇಳಿಯಬೇಕು. ನನ್ನ ಕಂದನ ಜತೆಗಿರಲು ನನಗೊಂದಷ್ಟು ಸಮಯವನ್ನು ಹೆಚ್ಚು ಕೊಡು ಅಂತ ಬದುಕಿಗೊಂದು ಮನವಿ ಬರೆದು ಹಾಕಲಾ? ಹೇಳು ಮಗೂ... ಇದೆಲ್ಲ ಕೇಳಿಸಿಕೊಂಡು ಒಳಗೊಳಗೇ ನಗುತ್ತಿದ್ದೀಯಾ ನನ್ನ ಕಳ್ಳ ಪುಟ್ಟೂ ಬೇಗ ಬಾ ನೀನು... ಇಲ್ಲೊಂದು ತಂಗಾಳಿ ಹರಡಲಿ. ಇನ್ನು ನನ್ನ ಕಾಡಬೇಡ ಪ್ಲೀಸ್... ಅಪ್ಪ, ಅಮ್ಮ, ಅಕ್ಕ ಕಾದಿದ್ದೇವೆ ನಿನಗಾಗಿ...
- ಶಮಾ