ಕರ್ನಾಟಕದ ಚಿರಾಪುಂಜಿ ಎನಿಸಿಕೊಂಡ ಮಳೆಕಾಡಿನ, ಹಸಿರ ಸೊಬಗಿನ ಸುಂದರ ತಾಣ ಆಗುಂಬೆ. ತೀರ್ಥಹಳ್ಳಿಯಿಂದ 33 ಕಿ.ಮೀ., ಉಡುಪಿಯಿಂದ 55 ಕಿ.ಮೀ. ದೂರ. ಒಂದೆಡೆ ಎತ್ತರದ ಪರ್ವತ. ಕೆಳಗೆ ಪಾತಾಳ. ಇದರ ನಡುವೆ ಏರುವ ವಕ್ರ ವಿನ್ಯಾಸದ ಘಾಟಿಯ ಮಾರ್ಗ, ಮನ ತಣಿಸುವ ಸೂರ್ಯಾಸ್ತದ ನೋಟ. ಆಗುಂಬೆಯ ಪೇಟೆಯ ಬಳಿಯಿರುವ ಸೀತೆ ಎಂಬಲ್ಲಿ ಮುಖ್ಯರಸ್ತೆ ಬಳಿ ಕಾಣಸಿಗುತ್ತದೆ ವಿಶಾಲವಾದ ಎರಡು ಮಹಡಿಗಳ ದೊಡ್ಡಮನೆ.
ಈ ಹಳ್ಳಿಮನೆಗೆ ಇರುವ ವಿಶೇಷ ಮಹತ್ವವೆಂದರೆ, 1900ರಲ್ಲಿ ನಿರ್ಮಾಣವಾಗಿದ್ದರೂ ಹೊಳಪು ಕಳೆದುಕೊಳ್ಳದಿರುವುದು. ಈಗಲೂ ಇದು ಮುಕ್ಕಾಗದೆ ಚಿರಯವ್ವನದಿಂದಲೇ ಉಳಿದುಕೊಂಡಿದೆ. ಮನೆಯನ್ನು ನೋಡುವಾಗ ಥಟ್ಟನೆ ಕಣ್ಣಿಗೆ ಕಟ್ಟುವುದು 1986ರಲ್ಲಿ ಬೆಂಗಳೂರು ದೂರದರ್ಶನದಲ್ಲಿ 39 ಕಂತುಗಳಲ್ಲಿ ಪ್ರಸಾರವಾದ 'ಮಾಲ್ಗುಡಿ ಡೇಸ್' ಧಾರಾವಾಹಿ. ಶಂಕರನಾಗ್ ನಿರ್ದೇಶನದಲ್ಲಿ ಸಿದ್ಧವಾಗಿ ಕಿರುತೆರೆಯ ವೀಕ್ಷಕರ ಮನಸೆಳೆದ ಈ ಧಾರಾವಾಹಿಯ ಬಹುಪಾಲು ಚಿತ್ರೀಕರಣವಾಗಿದ್ದು ಇದೇ ಆಗುಂಬೆಯಲ್ಲಿರುವ ಈ ದೊಡ್ಡ ಮನೆಯಲ್ಲಿ.
ಆರ್.ಕೆ. ನಾರಾಯಣ್ ಬರೆದ 'ಸ್ವಾಮಿ ಮತ್ತು ಅವನ ಗೆಳೆಯರು' ಎಂಬ ಕಾದಂಬರಿ ಮಾಲ್ಗುಡಿ ಡೇಸ್ ಎಂಬ ಹೆಸರಿನಿಂದ ಕನ್ನಡವಲ್ಲದೆ ತೆಲುಗಿನಲ್ಲೂ ಪ್ರಸಾರವಾಗಿದೆ. ಕನ್ನಡದಲ್ಲಿ ಅನಂತನಾಗ್, ಮಾಸ್ಟರ್ ಮಂಜುನಾಥ್ ಮೊದಲಾದವರು ಅಭಿನಯಿಸಿದ್ದರು. ಇದರ ಚಿತ್ರೀಕರಣ ನಡೆದ ದೊಡ್ಡ ಮನೆ ತಂಪಾದ ಪ್ರಶಾಂತ ವಾತಾವರಣದಲ್ಲಿದೆ. ಮಂಗಳೂರು ಹೆಂಚು ಹೊದೆಸಿದ ಈ ಮನೆಯ ಗೋಡೆ ಕಲ್ಲಿನದು. ಒಳಗೆ ಫಳಫಳ ಹೊಳೆಯುವ ಮರದ ಕಂಬಗಳಿವೆ. ಸುಂದರ ಕೆತ್ತನೆಯ ತೊಲೆಗಳಿವೆ. ವಿಶಾಲವಾದ ಒಳಾಂಗಣವಿದೆ. ಮರದಿಂದ ನಿರ್ಮಿಸಿದ ಕೆತ್ತನೆಯ ಬಾಗಿಲುಗಳು ಚೌಕಟ್ಟುಗಳು ನಯನ ಮನೋಹರ.
ಒಂದೊಮ್ಮೆ ಮೂವತ್ತು ಜನರಿದ್ದ ಈ ಮಹಡಿ ಮನೆಯಲ್ಲಿ ಈಗ ಕಸ್ತೂರಿಯಕ್ಕ ತಮ್ಮ ಮಗಳೊಂದಿಗೆ ಇದ್ದಾರೆ. 'ಮಾಲ್ಗುಡಿ ಡೇಸ್'ನಲ್ಲಿ ಅವರೂ ಪಾತ್ರವಹಿಸಿದ್ದರಂತೆ. ಮನೆಯೊಳಗೆ ಮೂರು ಅಡುಗೆಕೋಣೆಗಳಿವೆ. ಎಂಟು ಕೊಠಡಿಗಳಿವೆ. ಮನೆಯೊಳಗೆಯೇ ಬಾವಿಯೂ ಇದೆ. ಭೂಗತ ತೊಟ್ಟಿಯೊಂದಿದೆ, ಕಂಚು ತಾಮ್ರ ಮರದಿಂದ ತಯಾರಿಸಿದ ಹಳೇ ಮನೆ ಬಳಕೆಯ ಪರಿಕರಗಳು ಹೇರಳವಾಗಿವೆ. ಸಾಂಪ್ರದಾಯಿಕ ಸ್ನಾನದ ಮನೆಯಿದೆ. ಮನೆಯ ಸುತ್ತಲೂ ಚಿತ್ತಾಕರ್ಷಕ ಹೂಗಿಡಗಳಿವೆ.
ಈ ಮನೆಯನ್ನು ನೋಡಲೆಂದು ಅನೇಕ ಗಣ್ಯರು ಬಂದಿದ್ದಾರೆ. ಬರುತ್ತಿದ್ದಾರೆ. ಸರ್ ಎಂ. ವಿಶ್ವೇಶ್ವರಯ್ಯ, ಮೈಸೂರಿನ ಒಡೆಯರು, ದಿವಾನರು, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲಾದವರು ನೋಡಿ ಖುಷಿಪಟ್ಟಿದ್ದಾರೆ.
-ಪ. ರಾಮಕೃಷ್ಣ ಶಾಸ್ತ್ರಿ