ಆಧುನೀಕತೆ, ತಂತ್ರಜ್ಞಾನ ಮುಂದುವರಿದಂತೆ ನಮ್ಮ ಕೆಲಸವೊಂದು ಆಚಾರ-ವಿಚಾರ, ಸಂಸ್ಕೃತಿಗಳು ಬದಲಾಗುತ್ತಿವೆ. ಭಾರತೀಯ ಸಂಪ್ರದಾಯದಂತೆ ಹಿಂದೆಲ್ಲಾ ಹೆಣ್ಣು ಮಕ್ಕಳು ಕೈಗಳ ತುಂಬಾ ಗಾಜಿನ ಬಳೆ ಹಾಕುವುದು ಕಡ್ಡಾಯವಾಗಿತ್ತು. ಆದರೆ ಈಗ ಕೈತುಂಬಾ ಹಾಕುವುದಿರಲಿ, ಒಂದೋ, ಎರಡೋ ಚಿನ್ನದ ಬಳೆ ಹಾಕಿಕೊಂಡರೇ ಸಾಕು ಎಂಬಂತಹ ಪರಿಸ್ಥಿತಿ ಬಂದೊದಗಿದೆ.
ನಮ್ಮ ಸಂಪ್ರದಾಯದಲ್ಲಿ ಹೆಣ್ಣುಮಕ್ಕಳಿಗೆ ಬಳೆಗಳೇ ಭೂಷಣ. ಅವುಗಳಿಗೆ ಬಹು ಮುಖ್ಯವಾದ ಸ್ಥಾನವಿದೆ. ಪ್ರತಿ ಹಬ್ಬ ಹರಿದಿನಕ್ಕೆ . ಶುಭ ಸಮಾರಂಭಕ್ಕೆ ಕಳೆಗಟ್ಟುವುದೇ ಬಳೆಗಳ ಶಬ್ದದಿಂದ. ಅಲ್ಲದೇ ಗಾಜಿನ ಬಳೆಗಳೆಂದರೆ ನಾಜೂಕಾಗಿ ಬಳಸಬೇಕು. ಒಡೆಯದಂತೆ ಒಂದೆಡೆ ಎತ್ತಿಡಬೇಕು. ಅಷ್ಟು ಸಮಯ ನಮ್ಮ ಹೆಣ್ಣುಮಕ್ಕಳಿಗಂತೂ ಇರುವುದಿಲ್ಲ. ಕೈ ಬಳೆ ಗಲ್ಲೆಂದರೆ ಅದು ಹೆಣ್ತನದ ಸಂಕೇತ. ಅನತಿ ದೂರದಲ್ಲಿದ್ದರೂ ನಾರಿಯ ಬರುವಿಕೆಯನ್ನು ಗುರುತಿಸಿ ಹುಡುಗರ ಕಣ್ಣು ಸ್ವಲ್ಪ ಹಿಗ್ಗುತ್ತಿದ್ದವು.
ಹಿಂದೆಲ್ಲಾ ಕೈ ತುಂಬಾ ಬಳೆ, ಮುಡಿ ತುಂಬಾ ಹೂವು, ಕಾಲಲ್ಲಿ ಗೆಜ್ಜೆ ಹಣೆಯ ತುಂಬಾ ಕುಂಕುಮವಿಟ್ಟು ಹೆಣ್ಣು ಬಂದರೆ ಲಕ್ಷಣ ಜೊತೆಗೆ ಸಂಭ್ರಮ. ಕೈನಲ್ಲಿ ಬಳೆ ಹಣೆಯಲ್ಲಿ ಕುಂಕುಮ ಹಾಗು ಮುಡಿಯಲ್ಲಿ ಹೂವು ಇವಿಷ್ಟು ಇರದ ಹೆಣ್ಣು ಮನೆಗೆ ಅವಲಕ್ಷಣ ಎಂದು ಬೈಯ್ಯುತ್ತಿದ್ದರಂತೆ. ಆದರೆ ಈಗ ಅವರಸದ ಬದುಕಲ್ಲಿ ಅದಕ್ಕೆಲ್ಲಾ ಸಮಯವಿಲ್ಲ ಎಂದು ಮೂಗು ಮುರಿಯುವವರೇ ಹೆಚ್ಚು.
ಸಿಟಿಯಲ್ಲಿ ಗಾಜಿನ ಬಳೆಗಳನ್ನು ತೊಟ್ಟರೆ ಹಳ್ಳಿ ಗುಗ್ಗು ಎಂದು ಛೇಡಿಸುತ್ತಾರೆಂಬ ಕಾರಣಕ್ಕಾಗೇ ಹಳ್ಳಿಯಿಂದ ಉದ್ಯೋಗ ಅರಸಿ ಬಂದ ಎಷ್ಟೊ ಹುಡುಗಿಯರು ಬಳೆಗಳಿಂದ ಮಾರು ದೂರ ಸರಿಯುತ್ತಾರೆ.
ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಗಾಜಿನ ಬಳೆಗಳು ದೇಹದ ಉಷ್ಣತೆಯನ್ನು ಕಾಪಾಡಲು ಸಹಕರಿಸುತ್ತದೆ. ಚರ್ಮದೊಂದಿಗೆ ಪ್ರತಿದಿನ ಒಡನಾಡುವುದರಿಂದ ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುತ್ತದೆ.
ಮುಂಗೈನಿಂದ ಮೊಣಕೈ ಒಳಗಿನ ಭಾಗದಲ್ಲಿ ಬಳೆಗಳನ್ನು ಧರಿಸುವುದರಿಂದ ಆ ಭಾಗಕ್ಕೆ ಒಂದು ರೀತಿಯ ಚಿಕಿತ್ಸೆ ದೊರೆತಂತಾಗುತ್ತದೆ. ದಾರಿದ್ರ್ಯ ನಿವಾರಿಸಲೂ ಹಿರಿಯರು ಇವನ್ನು ಬಳಸುತ್ತಿದ್ದರಂತೆ.
ಈಗಂತೂ ಕಾಲೇಜಿನ ಹುಡುಗಿಯರ ಕೈನಲ್ಲಿ ಬಳೆಗಳೇ ನಾಪತ್ತೆ. ಇನ್ನು ಕೆಲಸಮಾಡುವ ಹುಡುಗಿಯರು, ಹೆಂಗಸರ ಕೈನಲ್ಲಿ ಬಳೆಗಳು ಕಂಡರೂ ಅವು ಒಂದೋ ಎರೆಡೋ ಆಗಿರುತ್ತವೆ. ಮನೆಯಲ್ಲೇ ಇರುವ ಹೆಂಗಸರ ಕೈನಲ್ಲಿ ಕಾಣುವುದೂ ಅಪರೂಪವಾಗಿವೆ. ಆದರೂ ಬಳೆಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಪ್ರತಿ ಹಬ್ಬಕ್ಕೂ ಮನೆ ಮನೆಯಲ್ಲೂ ಹೆಂಗಸರು ಬಳೆಗಳನ್ನು ಕೊಳ್ಳುತ್ತಾರೆ. ಆದರೆ ಧರಿಸುವುದು ಮಾತ್ರ ಹಬ್ಬಕ್ಕೆ ಸೀಮಿತವಾಗಿವೆ