ಮಹಿಳೆ-ಮನೆ-ಬದುಕು

ಆನ್‌ಲೈನ್‌ನಲ್ಲಿ ಮಹಿಳೆಯರಿಗೆ ದೌರ್ಜನ್ಯವೆಸಗಿದರೆ ದೂರು ದಾಖಲಿಸಲು ಪೋರ್ಟಲ್ ವ್ಯವಸ್ಥೆ

Rashmi Kasaragodu
ನವದೆಹಲಿ: ಸಾಮಾಜಿಕ ತಾಣಗಳ ಮೂಲಕ ಅಥವಾ ಇನ್ಯಾವುದೇ ಆನ್‌ಲೈನ್ ಮಾಧ್ಯಮಗಳ ಮೂಲಕ ಮಹಿಳೆಯರಿಗೆ ಕಿರುಕುಳ ನೀಡಿದರೆ, ಅಪಹಾಸ್ಯ ಮಾಡಿದರೆ ಅಥವಾ ಇನ್ಯಾವುದೇ ರೀತಿಯ ದೌರ್ಜನ್ಯವೆಸಗಿದರೆ ಈ ಬಗ್ಗೆ ಮಹಿಳೆಯರು ದೂರು ದಾಖಲಿಸಲು ಪೋರ್ಟಲ್‌ವೊಂದನ್ನು ಆರಂಭಿಸಲು ಕೇಂದ್ರ ಸರ್ಕಾರ ಯೋಜನೆ ಸಿದ್ಧಪಡಿಸಿದೆ. 
ಮಹಿಳೆ ಮತ್ತು ಮಕ್ಕಳ ಮೇಲಿನ ಸೈಬರ್ ಅಪರಾಧ ನಿಯಂತ್ರಣ (ಸಿಸಿಪಿಡಬ್ಲ್ಯುಸಿ) ಎಂಬ ಯೋಜನೆಯಡಿಯಲ್ಲಿ ಇಂಥದೊಂದು ಪೋರ್ಟಲ್ ಆರಂಭಿಸಲು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಮುಂದಾಗಿದೆ. ಈ ಎಲ್ಲ ಯೋಜನೆಗಳು ನಿರ್ಭಯಾ ನಿಧಿಯಡಿಯಲ್ಲಿ ಕಾರ್ಯವೆಸಗಲಿದೆ.
ಈ ಪೋರ್ಟಲ್‌ನಲ್ಲಿ ಆನ್‌ಲೈನ್‌ನಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ದೂರು ದಾಖಲಿಸಬಹುದಾಗಿದೆ.  ಗೃಹಸಚಿವಾಲಯದ ಸೈಬರ್ ಸೆಲ್ ಈ ಪೋರ್ಟಲ್ ಮೇಲೆ ನಿಗಾ ಇರಿಸಿ, ದೂರುಗಳನ್ನು ಸ್ವೀಕರಿಸಿ, ಕ್ರಮ ಕೈಗೊಳ್ಳುತ್ತದೆ ಎಂದು ಮಹಿಳಂ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವಾಲಯ ಹೇಳಿದೆ.
ಸಿಸಿಪಿಡಬ್ಲ್ಯುಸಿ ಯೋಜನೆಗೆ ರು. 244.32 ಕೋಟಿ ವೆಚ್ಚ ಅವಶ್ಯಕವಾಗಿದ್ದು, ಇದನ್ನು ನಿರ್ಭಯಾ ಫಂಡ್‌ನಿಂದ ಬಳಸಲಾಗುತ್ತದೆ. 
ಮಹಿಳೆಯರನ್ನು ಆನ್‌ಲೈನ್‌ನಲ್ಲಿ ಟ್ರೋಲ್ (ಅಪಹಾಸ್ಯ) ಮಾಡುವುದು ಕೂಡಾ ಅಪರಾಧ ಎಂದು ಪರಿಗಣಿಲ್ಪಡುವುದು ಎಂದು ಮಂಗಳವಾರ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮನೇಕಾ ಗಾಂಧಿ ಹೇಳಿದ್ದರು. ಅದೇ ವೇಳೆ ಮ್ಯಾಟ್ರಿಮೋನಿಯಲ್ ಸೈಟ್ (ವಧುವರರ ಅನ್ವೇಷಣಾ ವೆಬ್‌ಸೈಟ್ )ಗಳಲ್ಲಿ ನಡೆಯುವ ಆನ್‌ಲೈನ್ ದೌರ್ಜನ್ಯಗಳ ಬಗ್ಗೆಯೂ ಕ್ರಮ ತೆಗೆದುಕೊಳ್ಳಲು ಸಚಿವಾಲಯ ಮುಂದಾಗಿದೆ ಎಂದು ಮನೇಕಾ ಹೇಳಿದ್ದಾರೆ.
SCROLL FOR NEXT