ಹೋಳಿಗೆ ತಯಾರಿಸುತ್ತಿರುವ ಶರಾವತಿ ಭಟ್ ಮತ್ತು ಅವರ ತಂಡ 
ವಿಶ್ವ ಮಹಿಳಾ ದಿನ

ಸಾಗರದ 'ಹೋಳಿಗೆ ಮನೆ' ಮೂಲಕ ಸ್ವಾವಲಂಬನೆಯ ಹಾದಿ ಕಂಡುಕೊಂಡ ಶರಾವತಿ ಭಟ್!

ಮಹಿಳೆ ಸಾಧಿಸಲು ಕಾಲೇಜಿಗೆ ಹೋಗಿ ವಿದ್ಯಾಭ್ಯಾಸ ಪಡೆದು ನಗರಗಳಿಗೆ ಹೋಗಿ ಉದ್ಯೋಗಕ್ಕೆ ಹೋಗಬೇಕೆಂದೇನಿಲ್ಲ, ಸಾಧಿಸುವ ಹಠ, ಸೃಜನಶೀಲತೆ, ಧೈರ್ಯ, ಮನೆಯವರ ಸಹಕಾರ ಇವಿಷ್ಟಿದ್ದರೆ ಹಳ್ಳಿಯಲ್ಲಿದ್ದುಕೊಂಡೇ ಸಿಟಿ ಮಂದಿ ಕೂಡ ತಿರುಗಿ ನೋಡುವಂತೆ ಮಹಿಳೆ ಸಾಧಿಸಬಹುದು ಎಂಬುದಕ್ಕೆ ಈ ಮಹಿಳೆಯೇ ಸಾಕ್ಷಿ. 'ಮನಸ್ಸಿದ್ದರೆ ಮಾರ್ಗ, ಛಲವಿದ್ದರೆ ಸಾಧನೆ' ಎಂಬ ಮಾತಿಗೆ ಅನ್ವರ್ಥವೆಂಬಂತ

ಮಹಿಳೆ ಸಾಧಿಸಲು ಕಾಲೇಜಿಗೆ ಹೋಗಿ ವಿದ್ಯಾಭ್ಯಾಸ ಪಡೆದು ನಗರಗಳಿಗೆ ಹೋಗಿ ಉದ್ಯೋಗಕ್ಕೆ ಹೋಗಬೇಕೆಂದೇನಿಲ್ಲ, ಸಾಧಿಸುವ ಹಠ, ಸೃಜನಶೀಲತೆ, ಧೈರ್ಯ, ಮನೆಯವರ ಸಹಕಾರ ಇವಿಷ್ಟಿದ್ದರೆ ಹಳ್ಳಿಯಲ್ಲಿದ್ದುಕೊಂಡೇ ಸಿಟಿ ಮಂದಿ ಕೂಡ ತಿರುಗಿ ನೋಡುವಂತೆ ಮಹಿಳೆ ಸಾಧಿಸಬಹುದು ಎಂಬುದಕ್ಕೆ ಈ ಮಹಿಳೆಯೇ ಸಾಕ್ಷಿ. 'ಮನಸ್ಸಿದ್ದರೆ ಮಾರ್ಗ, ಛಲವಿದ್ದರೆ ಸಾಧನೆ' ಎಂಬ ಮಾತಿಗೆ ಅನ್ವರ್ಥವೆಂಬಂತೆ ಇವರು ಬದುಕು ಕಟ್ಟಿಕೊಂಡಿದ್ದಾರೆ.

ಇವರೇ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹುಳೆಗಾರು ಗ್ರಾಮದ ಶರಾವತಿ ಜಿ ಭಟ್ ಮತ್ತು ಗಣೇಶ್ ಭಟ್ ದಂಪತಿ. ಗಣೇಶ್ ಭಟ್ ಅವರು ದೇವಸ್ಥಾನದಲ್ಲಿ ಅರ್ಚಕರಾಗಿದ್ದರು. ವಿವಾಹವಾಗಿ ಮಗಳು ಹುಟ್ಟಿದ ಮೇಲೆ ಜೀವನೋಪಾಯಕ್ಕೆ ಈ ದಂಪತಿ ಕಂಡುಕೊಂಡಿದ್ದು ಸ್ವ ಉದ್ಯೋಗ, ಅದು ಹಪ್ಪಳ, ಸಂಡಿಗೆ, ಹೋಳಿಗೆ, ರೊಟ್ಟಿ ತಯಾರಿಸುವುದು. 

ಶರಾವತಿ ಮತ್ತು ಗಣೇಶ್ ಭಟ್ ದಂಪತಿ ತಮ್ಮ ಮನೆಯಲ್ಲಿಯೇ ಆಹಾರ ಪದಾರ್ಥಗಳನ್ನು ತಯಾರಿಸುವ ಫ್ಯಾಕ್ಟರಿ ಇಟ್ಟುಕೊಂಡಿದ್ದಾರೆ. ಅಲ್ಲಿ ಹತ್ತಾರು ಮಹಿಳೆಯರು ಕೆಲಸಕ್ಕೆ ಸಹ ಇದ್ದಾರೆ. ಊರು-ಪರವೂರುಗಳಿಂದ ಮದುವೆ, ಮುಂಜಿಯಂತಹ ಶುಭ ಸಮಾರಂಭಗಳಿಗೆ ಹೋಳಿಗೆಗೆ ಆರ್ಡರ್ ಬರುತ್ತವೆ, ಅಂತವರಿಗೆ ಮನೆಯಿಂದ ಇಲ್ಲವೇ ಕಾರ್ಯಕ್ರಮ ನಡೆಯುವ ಸ್ಥಳಗಳಿಗೆ ಹೋಗಿ ಹೋಳಿಗೆ ತಯಾರಿಸಿ ಕೊಟ್ಟು ಬರುತ್ತಾರೆ. ಸಮಾರಂಭಗಳಲ್ಲಿ ಊಟ ಬಡಿಸಲು ಜನಗಳನ್ನು ಕೂಡ ಒದಗಿಸುತ್ತಾರೆ. ಸುಮಾರು 10 ಸಾವಿರದವರೆಗೆ ಜನರಿಗೆ ಹೋಳಿಗೆ ತಯಾರಿಸಿಕೊಡಲು ಸೀಸನ್ ಗಳಲ್ಲಿ ಇವರಿಗೆ ಆರ್ಡರ್ ಬರುತ್ತವೆ.

ಮಾರಾಟಕ್ಕೆ ಸಿದ್ದವಾಗಿರುವ ಹೋಳಿಗೆ

ಬದುಕಿಗಾಗಿ ಕಂಡುಕೊಂಡ ನೆಲೆ: ಮದುವೆಯಾಗಿ ಸಂಸಾರ ನಿರ್ವಹಣೆ ಖರ್ಚುವೆಚ್ಚ ಜಾಸ್ತಿಯಾದಾಗ ಈ ದಂಪತಿಗೆ ಹೊಳೆದಿದ್ದೇ ಈ ಗೃಹೋಪಯೋಗಿ ಆಹಾರ ತಿನಿಸುಗಳನ್ನು ತಯಾರಿಸುವ ಆಲೋಚನೆ. ಹಳ್ಳಿಯಲ್ಲಿ ತಯಾರಿಸುವ ಹಪ್ಪಳ, ಸಂಡಿಗೆಗೆ ಪಟ್ಟಣ, ನಗರಗಳಲ್ಲಿ ಬೇಡಿಕೆ ಇರುತ್ತದೆ. ಹೀಗೆ ಯೋಚನೆ ಬಂದಿದ್ದೇ ತಡ 15 ವರ್ಷಗಳ ಹಿಂದೆ ಆರಂಭಿಸಿದ ಸಣ್ಣ ಉದ್ಯಮದಿಂದ ಇಂದು ಈ ದಂಪತಿ ಊರಿನ ಅನೇಕ ಬಡ ಕುಟುಂಬಗಳಿಗೆ ಕೆಲಸ ನೀಡುವ ಮೂಲಕ ಅವರ ಬದುಕಿಗೂ ಒಂದು ದಾರಿ ಮಾಡಿಕೊಟ್ಟಿದ್ದಾರೆ ಎಂದರೆ ತಪ್ಪಾಗಲಾರದು. 


ಈ ದಂಪತಿ ಮಾಡುತ್ತಿರುವ ಮತ್ತೊಂದು ಕೆಲಸ ಅಡಿಕೆ ಸುಲಿಯುವುದು. ಅಡಿಕೆ ಬೆಳೆ ಪ್ರಧಾನವಾಗಿರುವ ಮಲೆನಾಡು, ಕರಾವಳಿ ಭಾಗಗಳಲ್ಲಿ ಕೂಲಿ ಕಾರ್ಮಿಕರು ಸಿಗುವ ಸಮಸ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿರುವಾಗ ಅಡಿಕೆ ಸುಲಿಯಲು ಕೂಡ ಕೂಲಿ ಕಾರ್ಮಿಕರು ಸಿಗುವುದಿಲ್ಲ ಎಂದು ಬೆಳೆಗಾರರು ಗೊಣಗುವುದನ್ನು ಕೇಳಿದ್ದೇವೆ. ಇಂತವರಿಂದ ಕ್ವಿಂಟಾಲ್ ಗಟ್ಟಲೆ ಅಡಿಕೆಯನ್ನು ತರಿಸಿ ಕಾರ್ಮಿಕರಿಂದ ಅಡಿಕೆ ಸುಲಿಸಿ ಕೊಡುತ್ತಾರೆ. ಇದಕ್ಕೂ ದಂಪತಿ  25ರಿಂದ 30 ಕಾರ್ಮಿಕರನ್ನು ಇಟ್ಟುಕೊಂಡಿದ್ದಾರೆ. ಅಡಿಕೆ ಸುಲಿದವರಿಗೆ ಸಂಬಳ ಮತ್ತು ಇವರು ಕಮಿಷನ್ ಪಡೆಯುತ್ತಾರೆ. 

ಕಾರ್ಮಿಕರು ಅಡಿಕೆ ಸುಲಿಯುತ್ತಿರುವುದು 

ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಮೋದಿಯಿಂದ ಪ್ರಶಸ್ತಿ ಗಿಟ್ಟಿಸಿಕೊಂಡ ಗಟ್ಟಿಗಿತ್ತಿ: ಶರಾವತಿ ಭಟ್ ಅವರ ಚುರುಕುತನದ ಕೆಲಸ,ಜಾಣ್ಮೆ, ಬುದ್ಧಿವಂತಿಕೆ ನೋಡಿ ಊರವರೆಲ್ಲಾ ಸೇರಿ ಒತ್ತಾಯ ಮಾಡಿ ಅವರನ್ನು ಕಂಡಿಕ ಗ್ರಾಮ ಪಂಚಾಯತ್ ನ ಅಧ್ಯಕ್ಷೆಯಾಗಿ ಬಿಜೆಪಿಯಿಂದ ಅವಿರೋಧವಾಗಿ ಆಯ್ಕೆ ಮಾಡಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಸದಸ್ಯರ ಸಹಕಾರದೊಂದಿಗೆ ಉತ್ತಮ ಜನಪರ ಕೆಲಸ ಮಾಡಿ 2017ರಲ್ಲಿ ಪ್ರಧಾನಿ ಮೋದಿಯವರಿಂದ ಜಾರ್ಖಂಡ್ ನ ಜಮ್ಷೆಡ್ ಪುರದಲ್ಲಿ ಗೌರವ್ ಗ್ರಾಮ ಪುರಸ್ಕಾರ್ ಸನ್ಮಾನವನ್ನು ಶರಾವತಿ ಭಟ್ ಪಡೆದಿದ್ದಾರೆ. ಪ್ರಸ್ತುತ ಅದೇ ಪಂಚಾಯತ್ ನ ಸದಸ್ಯೆಯಾಗಿದ್ದಾರೆ. 
53 ವರ್ಷದ ಶರಾವತಿ ಭಟ್ ಓದಿದ್ದು ಕೇವಲ 7ನೇ ಕ್ಲಾಸು. ತಮ್ಮ ಮಗಳಿಗೆ ವಿದ್ಯಾಭ್ಯಾಸ ನೀಡಿ ಆಕೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾಳೆ. ಸಾಧಿಸುವ ಹುಮ್ಮಸ್ಸು, ಕೌಶಲ್ಯ, ಬುದ್ದಿವಂತಿಕೆ ಇದ್ದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಇವರೇ ಮಾದರಿ.

ಶರಾವತಿ ಭಟ್ ದಂಪತಿ ತಮ್ಮ ಮಗಳೊಂದಿಗೆ 

ಹಲವು ಮಹಿಳೆಯರಿಗೆ ದಾರಿದೀಪ: ಹಳ್ಳಿಯಲ್ಲಿ ಅನೇಕ ಅನಕ್ಷರಸ್ಥ ಮಹಿಳೆಯರಿರುತ್ತಾರೆ, ಮನೆಯಲ್ಲಿ ಜೀವನಕ್ಕೆ ಸರಿಯಾದ ವ್ಯವಸ್ಥೆಯಿರುವುದಿಲ್ಲ. ಪತಿಗೆ ಕುಡಿಯುವ ಚಟವಿರುತ್ತದೆ. ಮನೆ, ಮಡದಿ, ಸಂಸಾರವನ್ನು ಕೆಲವು ಗಂಡಸರು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಅಂತವರಿಗೆ ಶರಾವತಿ ಭಟ್ ಅವರ ಅಡಿಕೆ ಸುಲಿಯುವ ಮತ್ತು ಹೋಳಿಗೆ ತಯಾರಿಸುವ ಫ್ಯಾಕ್ಟರಿಯಲ್ಲಿ ಉದ್ಯೋಗ ಸಿಕ್ಕಿ ಜೀವನಕ್ಕೆ ದಾರಿದೀಪವಾಗಿದೆ. ಗ್ರಾಮದಲ್ಲಿ ಶ್ರೀನಿಧಿ ಸ್ತ್ರೀಶಕ್ತಿ ಕೇಂದ್ರ ಆರಂಭಿಸಿದ್ದಾರೆ. ಇದರ ಮೂಲಕ ಕೂಡ ಮಹಿಳೆಯರಿಗೆ ಅನೇಕ ಅನುಕೂಲಗಳಾಗಿವೆ ಎನ್ನುತ್ತಾರೆ  .

ಶರಾವತಿ ಭಟ್ ಅವರ ಮೊಬೈಲ್ ಸಂಖ್ಯೆ: 9482208730

ಲೇಖನ: ಸುಮನಾ ಉಪಾಧ್ಯಾಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT