ಹೆಣ್ಣು ಸಂಸಾರದ ಕಣ್ಣು. ಇಡೀ ಜಗತ್ತನ್ನೇ ತೂಗುವ ಗೆಲ್ಲುವ ಶಕ್ತಿ ಅವಳಲ್ಲಿದೆ. ತನ್ನ ಆಸಕ್ತಿ, ಅಭಿರುಚಿ, ಜವಾಬ್ದಾರಿಗಳನ್ನು ಸಂಸಾರದಲ್ಲಷ್ಟೆ ಅಲ್ಲದೆ ಸಮಾಜದಲ್ಲೂ ತೋರುವುದು/ವಹಿಸುವುದು ಅವಳ ವೈಶಿಷ್ಟ್ಯ. ಸದಾ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಸಿಕೊಳ್ಳುವ ಅವಳು ಸಂಸಾರ ಹಾಗು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತನ್ನ ಆರೋಗ್ಯ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದನ್ನು ಮರೆಯುತ್ತಾಳೆ. ಈಗಿನ ಜಂಜಾಟದ, ಒತ್ತಡದ ಜೀವನದಲ್ಲಿ ಸದಾಕಾಲ ಎನರ್ಜಿ ಉಳಿಸಿಕೊಳ್ಳುವುದು ಅತ್ಯಗತ್ಯ.
ಇಲ್ಲಿವೆ ಕೆಲವು ಸುಲಭೊಪಾಯಗಳು
- ಸಮತೋಲನ ಆಹಾರ ಸೇವಿಸುವುದರಿಂದ ಅಧಿಕ ಸುಸ್ತು ಆಯಾಸವನ್ನು ತಡೆಗಟ್ಟಬಹುದು. ಸಮತೋಲನ ಆಹಾರ ಕಾರ್ಬೋ ಹೈಡ್ರೇಟ್, ಪ್ರೊಟೀನ್, ಫ್ಯಾಟ್, ವಿಟಮಿನ್ಸ್, ಖನಿಜಗಳು, ನೀರು ಈ ಎಲ್ಲ ಪೋಷಕಾಂಶಗಳನ್ನು ಹೊಂದಿರಬೇಕು.
- ಪ್ರತಿನಿತ್ಯದ ಆಹಾರದಲ್ಲಿ ಹಸಿ ತರಕಾರಿ, ಹಣ್ಣು-ಹಂಪಲು ಸೊಪ್ಪುಗಳನ್ನು ಹೇರಳವಾಗಿ ಬಳಸಬೇಕು. ಇವುಗಳಿಂದ ಕಬ್ಬಿಣ, ಕ್ಯಾಲ್ಸಿಯಂ, ನಾರು, ಖನಿಜಾಂಶ ಮತ್ತು ಜೀವಸತ್ವಗಳು ದೊರೆಯುತ್ತವೆ.
- ದಿನಕ್ಕೆ 2-3 ಲೀಟರಿನಷ್ಟು ನೀರು ಕುಡಿಯಬೇಕು. ಮಿತವಾದ ಕಾಫಿ/ಟೀ ಸೇವನೆಯು ಸಹ ಮಾನಸಿಕ ಸ್ವಾಸ್ಥ್ಯಕ್ಕೆ ಉಪಯುಕ್ತವಾಗಬಹುದು.
- ಖಾಲಿ ಹೊಟ್ಟೆಗೆ ಸೇವಿಸಿದ ಲೋಳೆರಸದ ಜ್ಯೂಸ್ ಇಡೀ ದಿನ ನಿಮ್ಮನ್ನು ಹೈ ಎನರ್ಜೆಟಿಕ್ ಆಗಿರುವಂತೆ ಮಾಡಬಲ್ಲದು. ಅಂತೆಯೆ ಡ್ರೈ ಫ್ರೂಟ್ಸ್ ಕೂಡ.
- ಉತ್ತಮ ಆಹಾರ ಕ್ರಮದ ಜೊತೆ ವ್ಯಾಯಾಮವು ಅತ್ಯಗತ್ಯ. ನಿಯಮಿತ ವ್ಯಾಯಾಮ, ಯಾವುದೇ ರೀತಿಯ ದೈಹಿಕ ಚಟುವಟಿಕೆಯೂ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಡಲು ಸಹಕಾರಿ. ನಡಿಗೆ, ಈಜು, ಕ್ರೀಡೆಗಳು, ತೋಟಗಾರಿಕೆ, ಸೈಕ್ಲಿಂಗ್ ಇತ್ಯಾದಿ ಚಟುವಟಿಕೆಗಳು ವ್ಯಾಯಾಮ ನೀಡಬಲ್ಲವು.
- ಇವೆಲ್ಲದರೊಂದಿಗೆ ಸ್ಥಿತಪ್ರಜ್ಞ ಮನಸ್ಸು ಆರೋಗ್ಯ ಭಾಗ್ಯಕ್ಕೆ ಸೋಪಾನವಾಗಬಲ್ಲುದು.
ಚೈತ್ರಾ ರಾವ್, ಡಯಟೀಷನ್