ಪ್ರತೀ ಯಶಸ್ವಿ ಪುರುಷನಹಿಂದೆ ಒಬ್ಬ ಹೆಣ್ಣು ಇರ್ತಾಳೆ ಅನ್ನೋದು ಲೋಕಾರೂಢಿ ಮಾತು. ಹಾಗೆ ನನಗೂ ಸಹ, ನಾನು ಒಂದುಬದುಕು ಕಟ್ಕೊಳ್ಳೋ ಹಾಗಾಗೋವರೆಗೂ ನನ್ನ ಬದುಕಿನ ಬೆನ್ನೆಲುಬಾಗಿ ನಿಂತದ್ದು ನಮ್ಮಮ್ಮ.
ನನ್ನಮ್ಮ ತನ್ನಬಹುಪಾಲು ಹಗಲುಗಳನ್ನ ಕಳೆದದ್ದು.. ಭತ್ತದ ಗದ್ದೆ.. ಕಬ್ಬಿನ ಗದ್ದೆ.. ಅಡಿಕೆ ತೋಟಗಳಲ್ಲೇ. ಬಹುಪಾಲುಸಂಜೆ ಕಳೆದದ್ದು ಮನೆಯ ಒಲೆಯ ಮುಂದೆಯೇ. ಆಲೆಮನೆಯಲ್ಲಿ ಬೆಲ್ಲದ ಮುದ್ದೆಯನ್ನ ಗೋಲಿ ಮಾಡಿ ಎಸೆಯುತಿದ್ದರೀತಿಯೊಂದೇ ಸಾಕಿತ್ತು ಅಮ್ಮ ಎಷ್ಟು ಚುರುಕು ಅಂತ ಹೇಳೋಕೆ. ಇದೆಲ್ಲ ಅಮ್ಮ ಮಾಡಿದ್ದು ಕೇವಲ ಅವಳ ಕುಟುಂಬದಕ್ಷೇಮಕ್ಕೆ. ಅವಳ ಬದುಕಿನ ಅತಿ ಅತಿ ದೊಡ್ಡ ಕನಸು ಅನಿಸಿಕೊಂಡ ನಮ್ಮ ಭವಿಷ್ಯದ ಸಾರ್ಥಕತೆಗೆ. ಅಮ್ಮಯಾವತ್ತೂ ನಮ್ಮನ್ನ ಶಾಲೆಗೆ ತಯಾರು ಮಾಡಿ ಕಳಿಸಲಿಲ್ಲ.. ಬದಲಾಗಿ ನಮ್ಮನ್ನ ನಾವು ತಯಾರಿ ಮಾಡಿಕೊಳ್ಳೋದನ್ನಕಲಿಸಿದ್ಳು.
ನಾವು ಬಡವರು ಅನ್ನೋ ಭಾವ ಶಬ್ಧ ಯಾರಾದರೂ ನಮ್ಮ ಕುರಿತಾಗಿ ಬಳಸಿದಾಗಷ್ಟೇ ನಮಗೆ ಅನುಭವಕ್ಕೆಬರುವ ಹಾಗಾಗುತ್ತಿದ್ದದ್ದು ಅಮ್ಮನ ಆರೈಕೆಯಿಂದಷ್ಟೇ. ನಾನು ಒಬ್ಬ ಸರ್ಕಾರಿ ನೌಕರನಾಗಿ ನನ್ನ ಕುಟುಂಬವನ್ನಸಲಹುವ ಮಟ್ಟಿಗೆ ಬೆಳೆದರೂ.. ಹುಟ್ಟುಗುಣವೆಂಬಂತೆ ಅಮ್ಮ ಈಗಲೂ ಗದ್ದೆ ಕೆಲಸಕ್ಕೆ ಹೊಗ್ತಾಳೆ. ಅದೇಅಮ್ಮನಿಂದ ನಾನು ಕಲಿತದ್ದು. ಯಾವುದೇ ಕಾಲಘಟ್ಟದಲ್ಲೂ ಬದುಕು ಕಟ್ಟಿಕೊಳ್ಳಬಹುದಾದ ವಿಶ್ವಾಸವನ್ನ.ನನ್ನಮ್ಮ ನನ್ನ ಬದುಕಿನ ಅತಿದೊಡ್ಡ ಸ್ಪೂರ್ತಿ. ನನ್ನ ಬದುಕಿನ ಪರಿಪೂರ್ಣ ಮಹಿಳೆ ಅಮ್ಮನಿಗೆ ಮಹಿಳಾದಿನದಶುಭಾಶ ಯಗಳು.
-ಸತೀಶ್ ನಾಯ್ಕ್ ಭದ್ರಾವತಿ