ಕಾಬೂಲ್: ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದು, 17 ಮಂದಿಗೆ ಗಂಭೀರ ಗಾಯಗಳಾಗಿವೆ.
ಅಫ್ಗಾನಿಸ್ತಾನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣದ ಮೊದಲ ಚೆಕ್ ಪೋಸ್ಟ್ ಬಳಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದಿಂದಾಗಿ ಇನ್ನು ಅಪಾರ ಸಾವು ನೋವು ಸಂಭವಿಸುವ ಸಾಧ್ಯತೆ ಇದೆ ಎಂದು ಕಾಬೂಲ್ ಉಪ ಪೊಲೀಸ್ ಮುಖ್ಯಸ್ಥ ಸೈಯದ್ ಗುಲ್ ಅಘ್ಹಾ ರ್ರೌಹಾನಿ ತಿಳಿಸಿದ್ದಾರೆ.
ನಿಲ್ದಾಣಕ್ಕೆ ತೆರಳುವ ಮುನ್ನ ಪ್ರಯಾಣಿಕರ ಮೊದಲ ಸುತ್ತಿನ ದೇಹ ತಪಾಸಣೆ ಮಾಡುವ ಚೆಕ್ ಪೋಸ್ಟ್ ಬಳಿ ಈ ದುರ್ಘಟನೆ ಸಂಭವಿಸಿದೆ. ಸ್ಫೋಟದಿಂದಾಗಿ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದೆ.
ಸ್ಫೋಟ ಸಂಭವಿಸಿದ ನಂತರ ಆ್ಯಂಬುಲೇನ್ಸ್ ಗಳ ಮೂಲಕ ದೇಹಗಳನ್ನು ಆಸ್ಪತ್ರೆಗಳಿಗೆ ಸಾಗಿಸಲಾಗುತ್ತಿದೆ.
ಯಾವುದೇ ಭಯೋತ್ಪಾದನೆ ಸಂಘಟನೆ ಇನ್ನು ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ ಎಂದು ಸೈಯದ್ ತಿಳಿಸಿದ್ದಾರೆ.