ಅಬುಧಾಬಿ: ಎರಡು ದಿನಗಳ ಯುಎಇ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಸ್ಡಾರ್ ನಲ್ಲಿ ಉದ್ಯಮಿಗಳ ಜತೆ ಮಾತನಾಡಿದ್ದು, ಭಾರತದಲ್ಲಿ 1 ಟ್ರಿಲಿಯನ್ ಡಾಲರ್ ಬಂಡವಾಳ ಹೂಡಿಕೆಗೆ ಅವಕಾಶಗಳಿವೆ ಎಂದರು.
ಸೋಮವಾರ ಕಾರ್ಬನ್ ಮುಕ್ತ ಮಸ್ಡಾರ್ ನಗರಕ್ಕೆ ಭೇಟಿ ನೀಡಿದರು. ಅಲ್ಲಿನ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಅತ್ಯಂತ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ರಾಷ್ಟ್ರ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಬಂಡವಾಳ ಹೂಡಿಕೆಗೆ ಸಾಕಷ್ಟು ಅವಕಾಶಗಳಿವೆ. ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ದೇಶದ ಜನತೆಗೆ ಕಡಿಮೆ ಬೆಲೆಯಲ್ಲಿ ಮನೆ ನಿರ್ಮಾಣ ಗುರಿ ಹೊಂದಿದೆ.
2022ರೊಳಗೆ ಭಾರತದಲ್ಲಿ 5 ಕೋಟಿ ಮನೆಗಳ ನಿರ್ಮಾಣ ಮಾಡಬೇಕಿದ್ದು, ಮನೆಗಳ ನಿರ್ಮಾಣಕ್ಕೆ ನಮಗೆ ತಂತ್ರಜ್ಞಾನದ ಅಗತ್ಯವಿದೆ. ವೇಗ, ಗುಣಮಟ್ಟಕ್ಕಾಗಿ ಆಧುನಿಕ ತಂತ್ರಜ್ಞಾನದ ಅಗತ್ಯವಿದೆ ಎಂದರು. ಮನೆಗಳ ನಿರ್ಮಾಣಕ್ಕೆ 7 ವರ್ಷ ಸಮಯವಷ್ಟೆ ಇದ್ದು, ಕೆಲಸ ತುಂಬಾನೇ ವೇಗವಾಗಿ ಆಗಬೇಕಿದೆ. ಹಾಗೆಂದು ಗುಣಮಟ್ಟದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಮಯವೇ ಇಲ್ಲ ಎಂದರು.
ಭಾರತದಲ್ಲಿ ಸುಸರ್ಜಿತ 500 ರೇಲ್ವೆ ನಿಲ್ದಾಣಗಳ ನಿರ್ಮಾಣ ಮಾಡುವ ಗುರಿ ಇದೆ. ಈಗಿರುವ ರೇಲ್ವೆ ನಿಲ್ದಾಣಗಳಲ್ಲಿ ಸಾಕಷ್ಟು ಸ್ಥಳಾವಕಾಶ ಇದ್ದು, ನಿಲ್ದಾಣದ ಮೇಲೆ ಮಾರುಕಟ್ಟೆ ನಿರ್ಮಿಸಿದರೆ ಹೇಗೆ? ಎಂದು ಪ್ರಧಾನಿ ಮೋದಿ ಉದ್ಯಮಿಗಳ ಅಭಿಪ್ರಾಯ ಕೇಳಿದರು.
ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಭಾರತದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಬಲಪಡಿಸಲಾಗುವುದು ಎಂದರು.