ವಿದೇಶ

ಶ್ರೀಲಂಕಾ ಪ್ರಧಾನಿಯಾಗಿ ವಿಕ್ರಮ ಸಿಂಘೆ ಪ್ರಮಾಣ ವಚನ ಸ್ವೀಕಾರ

Srinivasamurthy VN

ಕೊಲಂಬೊ: ನಾಲ್ಕನೇ ಬಾರಿಗೆ ಶ್ರೀಲಂಕಾ ಪ್ರಧಾನಿಯಾಗಿ ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್‌ಪಿ) ಪಕ್ಷದ ಮುಖ್ಯಸ್ಥ ರಣಿಲ್ ವಿಕ್ರಮ ಸಿಂಘೆ ಶುಕ್ರವಾರ ಪ್ರಮಾಣವಚನ ಸ್ವೀಕಾರ  ಮಾಡಿದರು.

ಶ್ರೀಲಂಕಾದ ಅಧ್ಯಕ್ಷರ ಭವನದಲ್ಲಿ ಇಂದು ಬೆಳಗ್ಗೆ 9.30ರ ಸಮಯದಲ್ಲಿ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 66 ವರ್ಷದ ರಣಿಲ್ ವಿಕ್ರಮ ಸಿಂಘೆ ಅವರು 4ನೇ ಬಾರಿಗೆ ಶ್ರೀಲಂಕಾದ  ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಕಾರ್ಯಕ್ರಮದಲ್ಲಿ ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ, ಹಾಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸೇರಿದಂತೆ ಹಲವು  ಗಣ್ಯರು ಉಪಸ್ಥಿತರಿದ್ದರು.

ಕಳೆದ ಸೋಮವಾರ ನಡೆದ ಚುನಾವಣೆಯಲ್ಲಿ ವಿಕ್ರಮ ಸಿಂಘೆ ನೇತೃತ್ವದ ಯುಎನ್‌ಪಿ ಪಕ್ಷ 106 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಮೂಲಕ ಸರಳ ಬಹುಮತಕ್ಕೆ ಕೇವಲ 7 ಸ್ಥಾನಗಳ ಕೊರತೆ ಎದುರಿಸಿತ್ತು. ಆದರೆ ಅವರಿಗೆ ರಾಜಕೀಯ ಪ್ರತಿಸ್ಪರ್ಧಿ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಯುನೈಟೆಡ್ ಪೀಪಲ್ಸ್ ಫ್ರೀಡಂ ಅಲಯನ್ಸ್ ನಿಂದಲೇ ಬೆಂಬಲ ದೊರೆತ ಹಿನ್ನಲೆಯಲ್ಲಿ ಮೈತ್ರಿ ಸರ್ಕಾರ ರಚನೆ ಮಾಡಿದ್ದಾರೆ.

ಇನ್ನು ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ನೇತೃತ್ವದ ಮೈತ್ರಿಕೂಟ 95 ಸ್ಥಾನಗಳನ್ನು ಪಡೆದುಕೊಂಡಿದೆ. ತಮಿಳು ಪ್ರಾಬಲ್ಯದ ಕ್ಷೇತ್ರಗಳಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವ ತಮಿಳು ನ್ಯಾಷನಲ್ ಅಲಯನ್ಸ್ 16 ಸ್ಥಾನಗಳಲ್ಲಿ ವಿಜಯ ಸಾಧಿಸಿದೆ.

ರಣಿಲ್ ವಿಕ್ರಮ ಸಿಂಘೆ ನೇತೃತ್ವದ ನೂತನ ಸರ್ಕಾರಕ್ಕೆ ಆರಂಭದಲ್ಲಿಯೇ ಹಲವು ಸಮಸ್ಯೆಗಳು ಎದುರಾಗಲಿದ್ದು, ಎಲ್ ಟಿಟಿಇ ವಿರುದ್ಧದ ಯುದ್ಧದಲ್ಲಿ ನಡೆದಿದೆ ಎನ್ನಲಾದ ಯುದ್ಧಾಪರಾಧಗಳ  ಕುರಿತಂತೆ ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗ ಇದೇ ಸೆಪ್ಟೆಂಬರ್ ನಲ್ಲಿ ತನ್ನ ವರದಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಇನ್ನು ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ರಾಷ್ಟ್ರೀಯವಾದಿ ಆಡಳಿತವನ್ನು ಪ್ರಬಲವಾಗಿ ವಿರೋಧಿಸಿ, ಭಾರಿ ಸಂಖ್ಯೆಯಲ್ಲಿ ಸಿರಿಸೇನಾ ಅವರನ್ನು ಬೆಂಬಲಿಸಿದ್ದ ತಮಿಳು ಪ್ರಾಂತ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಪ್ರಾಂತ್ಯಗಳಿಗೂ ಅಧಿಕಾರ  ವಿಕೇಂದ್ರೀಕರಿಸಲೇ ಬೇಕಾದ ಕ್ಲಿಷ್ಟಕರ ಹೊಣೆ ನೂತನ ಸರ್ಕಾರದ ಮೇಲಿದೆ.

SCROLL FOR NEXT