ನ್ಯೂಯಾರ್ಕ್: ಅಮೆರಿಕಾದ ಓಹಿಯೋದಲ್ಲಿ ಮದ್ಯದಂಗಡಿ ಪ್ರಾರಂಬಿಸಲು ಪರವಾನಗಿಗೆ ಅಲ್ಲಿನ ಪ್ರಾದೇಶಿಕ ರಾಜಕಾರಿಣಿಗೆ ಲಂಚ ನೀಡಿದ ಆರೋಪದ ಮೇಲೆ ಭಾರತ ಮೂಲದ ಉದ್ಯಮಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಮುಕುಂದಕುಮಾರ್ ಪಟೇಲ್ (೫೨) ವಿರುದ್ಧ ಕ್ರಿಮಿನಲ್ ಮಾಹಿತಿ ಪ್ರಕರಣ ದಾಖಲಿಸಲಾಗಿದೆ ಎಂದು ಅಮೆರಿಕಾದ ಅಟಾರ್ನಿಯೊಬ್ಬರು ತಿಳಿಸಿದ್ದಾರೆ.
ಆರೋಪಗಳ ಪ್ರಕಾರ ಪೂರ್ವ ಕ್ಲೀವ್ ಲ್ಯಾಂಡಿನ ಪಟೇಲ್ ಅವರು ಮದ್ಯದಂಗಡಿ ತೆರೆಯಲು ಪರವಾನಗಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ನಗರದ ಅಧಿಕಾರಿಗಳು ಇದಕ್ಕೆ ಆಸಕ್ತಿ ತೋರದೆ ಸಂಬಧ ಪಟ್ಟ ನಗರದ ಸಮುದಾಯದ ಜೊತೆ ಚರ್ಚಿಸಿ ಅವರ ಮನವಿಯನ್ನು ಪರಿಗಣಿಸುವುದಾಗಿ ತಿಳಿಸಿತ್ತು.
ಆದರೆ ಪಟೇಲ್ ಅವರು ಪೂರ್ವ ಕ್ಲೀವ್ ಲ್ಯಾಂಡಿನ ನಗರಸಭೆಯ ಅಧಿಕಾರಿಯೊಬ್ಬರನ್ನು ಕಳೆದ ವರ್ಷದ ಅಕ್ಟೋಬರ್ ನಲ್ಲಿ ಭೇಟಿ ಮಾಡಿ, ಅರ್ಜಿಗಿ ಸಹಿ ಹಾಕಿದರೆ ೨೦೦೦ ಡಾಲರ್ ನೀಡುವುದಾಗಿ ಆಮಿಷ ಒಡ್ಡಿದ್ದರು ಎಂದು ಆರೋಪಿಸಲಾಗಿದೆ.
ಆದರೆ ಅಧಿಕಾರಿ ನಿರಾಕರಿಸಿದ್ದಕ್ಕೆ ಆಮಿಷವನ್ನು ೩೦೦೦ ಡಾಲರ್ ಗಳಿಗೆ ಏರಿಸಿದ್ದಾರೆ. ಆಗಲೂ ನಿರಾಕರಿಸಿದಾಗ ತಮ್ಮ ಬೆಲೆಯನ್ನು ನಿಗದಿಪಡಿಸಲು ಅಧಿಕಾರಿಗೆ ಪಟೇಲ್ ಕೇಳಿದ್ದಾರೆ. ಇದರಿಂದ ಕುಪಿತಗೊಂಡ ಅಧಿಕಾರಿ ಎಫ್ ಬಿ ಐ ಗೆ ಈ ವಿಷಯ ತಿಳಿಸಿದ್ದಾರೆ.
ಮತ್ತೊಂದು ಸಭೆಯಲ್ಲಿ ಪಟೇಲ್ ಮತ್ತೊಬ್ಬ ನಗರಸಭೆ ಅಧಿಕಾರಿಗೆ ೪೦೦೦ ಡಾಲರ್ ಆಮಿಷ ಒಡ್ಡಿ, ೧೦೦೦ ಡಾಲರ್ ಮುಗಂಡ ನೀಡಿದ್ದಾರೆ. ಆಗ ಆ ಅಧಿಕಾರಿ ಎಫ್ ಬಿ ಐ ಗೆ ಸೂಚಿಸಿ ಹಣ ವಶಕ್ಕೆ ನೀಡಿದ್ದಾರೆ.