ವಿದೇಶ

ಸಿರಿಯಾ ನಿರಾಶ್ರಿತನಿಗೆ ಹೊಸ ಬದುಕು ಕೊಟ್ಟ ಜಾಲತಾಣ

Srinivasamurthy VN

ನವದೆಹಲಿ: ಇದು ಸಾಮಾಜಿಕ ಜಾಲತಾಣಗಳು ತರಬಹುದಾದ ಗುಣಾತ್ಮಕ ಬದಲಾವಣೆಗೊಂದು ನಿದರ್ಶನ. ಗಲಭೆಗ್ರಸ್ತ ಸಿರಿಯಾದ ನಿರಾಶ್ರಿ ತನೊಬ್ಬ ತನ್ನ ಇಬ್ಬರು ಮಕ್ಕಳನ್ನು ಸಾಕಲು ಬೀದಿಯಲ್ಲಿ ಪೆನ್ನು ಮಾರುತ್ತಿದ್ದ ಚಿತ್ರವೊಂದು ಟ್ವಿಟರ್‍ನಲ್ಲಿ ಜಗತ್ತಿನಾದ್ಯಂತ ಸಾವಿರಾರು ಜನರ ಗಮನ ಸೆಳೆದಿದೆ.

ಅಷ್ಟೇ ಅಲ್ಲ, ಆತನ ಸಂಕಷ್ಟಕ್ಕೆ ಮರುಗಿದ ಸಾವಿರಾರು ಮಂದಿ ಭರಪೂರ ಆರ್ಥಿಕ ನೆರವನ್ನೂ ನೀಡಿ ಮಕ್ಕಳ ಬದುಕಿಗೆ ಆಧಾರವಾಗಿದ್ದಾರೆ. ಲೆಬನಾನ್ ಪತ್ರಕರ್ತ ಗಿಸ್ಸರ್ ಸಿಮನಾರ್ಸನ್ ಕಳೆದ  ವಾರ, 4 ವರ್ಷದ ಮಗಳನ್ನು ಹೆಗಲಲ್ಲಿ ಹೊತ್ತುಕೊಂಡು ಬೈರೂತ್ ನ ಬೀದಿಯಲ್ಲಿ ಪೆನ್ನು ಮಾರುತ್ತಿದ್ದ ಅಬ್ದುಲ್ಲಾ ನ ಚಿತ್ರವನ್ನು ಸಾಮಾಜಿಕ ತಾಣದಲ್ಲಿ ಹಾಕಿ, ಆತನಿಗೆ ನೆರವು ನೀಡಲು ಮತ್ತು  ಗುರುತು ಪತ್ತೆಗೆ ಮನವಿ ಮಾಡಿದ್ದ. ಒಂದೇ ವಾರದಲ್ಲಿ ಲಕ್ಷ ಮಂದಿ ಆತನ ಪೋಸ್ಟ್ ಶೇರ್ ಮಾಡಿದ್ದರು. ಪರಿಣಾಮ ಆತನ ಮಾಹಿತಿ ಪತ್ತೆಯಾಗಿದ್ದಷ್ಟೇ ಅಲ್ಲ, 42 ಸಾವಿರ ಡಾಲರ್ ನೆರವು ಹರಿದುಬಂದಿದೆ.

`ಹೊಸ ಬದುಕಿನ ಆರಂಭ' ಎಂಬ ಹೆಸರಿನಲ್ಲಿ ಸಿಮನಾರ್ಸನ್ ಆರಂಭಿಸಿದ ಈ ಅಭಿಯಾನ ಇದೀಗ ಅಬ್ದುಲ್ ಮತ್ತು ಆತನ ಮಕ್ಕಳ ಬದುಕಿಗೆ ಹೊಸ ಭರವಸೆ ತಂದಿದೆ. `ಜಗತ್ತಿನಲ್ಲಿ  ಮಾನವೀಯತೆಯ ಒರತೆ ಇನ್ನೂ ಸಂಪೂರ್ಣ ಬತ್ತಿಹೋಗಿಲ್ಲ ಎಂಬುದನ್ನು ಈ ಅಭಿಯಾನ ಸಾಬೀತುಮಾಡಿದೆ' ಎಂದು ಪ್ರತಿಕ್ರಿಯಿಸಿದ್ದಾರೆ ಸಿಮನಾರ್ಸನ್.


SCROLL FOR NEXT