ಬೀಜಿಂಗ್: ಚೀನಾದ ಯುವಾನ್ ಕರೆನ್ಸಿಯನ್ನು ಐದನೇ ಮೀಸಲು ಕರೆನ್ಸಿ ಎಂದು ಅಂತಾರಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಘೋಷಿಸಿದೆ.
ಅಮೆರಿಕದ ಡಾಲರ್, ಯುರೋಪಿಯನ್ ಒಕ್ಕೂಟದ ಯುರೋ, ಬ್ರಿಟನ್‍ನ ಪೌಂಡ್, ಜಪಾನ್‍ನ ಯೆನ್ ನಂತರ ಈಗ ಚೀನಾದ ಯುವಾನ್ ಅಂತಾರಾಷ್ಟ್ರೀಯ ಕರೆನ್ಸಿ ಸ್ಥಾನ ಪಡೆದಂತಾಗಿದೆ. ಐಎಂಎಫ್ ನ ಈ ಕ್ರಮದಿಂದಾಗಿ ಜಾಗತಿಕ ವಾಣಿಜ್ಯ ಮತ್ತು ಹಣಕಾಸು ಕ್ಷೇತ್ರದಲ್ಲಿ ಚೀನಾದ ಪಾತ್ರದ ಮಹತ್ವವನ್ನು ಗುರುತಿಸಿದಂತಾಗಿದೆ' ಎಂದು ಚೀನಾದ ಕೇಂದ್ರ ಬ್ಯಾಂಕ್ ಆಗಿರುವ ದಿ ಪೀಪಲ್ಸ್ ಬ್ಯಾಂಕ್ ಹರ್ಷ ವ್ಯಕ್ತಪಡಿಸಿದೆ.
ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿರುವ ಚೀನಾ ಇಂಥದೊಂದು ಕ್ರಮಕ್ಕಾಗಿ ಹಲವಾರು ವರ್ಷಗಳಿಂದ ನಿರಂತರ ತಯಾರಿ ನಡೆಸಿತ್ತು. ಇತ್ತೀಚೆಗೆ ಚೀನಾ ಆರ್ಥಿಕ ಹಿನ್ನಡೆ ಎದುರಿಸುತ್ತಿದೆ. ಅದರ ವಾರ್ಷಿಕ ಬೆಳವಣಿಗೆ ದರವನ್ನು ಭಾರತ ಮೀರಿಸಿದೆ. ಈ ಹಿನ್ನೆಲೆಯಲ್ಲಿ ಯುವಾನ್‍ಗೆ ಸಿಕ್ಕಿದ ಮನ್ನಣೆ, ಚೀನಾದ ಆರ್ಥಿಕ ಚೇತರಿಕೆಗೆ ನೆರವಾಗಬಹುದೆಂದು ನಿರೀಕ್ಷಿಸಲಾಗಿದೆ.
ಏನಿದು ಮೀಸಲು ಕರೆನ್ಸಿ?: ಸ್ಥಿರ ಹಣಕಾಸು ಪರಿಸ್ಥಿತಿ ಹೊಂದಿರುವ ಹಾಗೂ ವ್ಯಾಪಕ ವಿದೇಶಿ ವಹಿವಾಟು ನಡೆಸುವ ದೇಶಗಳ ಕರೆನ್ಸಿಯನ್ನು ಐಎಂಎಫ್ ಮೀಸಲು ಕರೆನ್ಸಿಯಾಗಿ ಪರಿಗಣಿಸುತ್ತದೆ. ಈ ಸ್ಥಾನಮಾನ ಪಡೆದ ದೇಶದ ಕೇಂದ್ರ ಬ್ಯಾಂಕ್, ಪ್ರಮುಖ ಹಣಕಾಸು ಸಂಸ್ಥೆಗಳು ನಿಗದಿತ ಮೊತ್ತದ ಅಂತಾರಾಷ್ಟ್ರೀಯ ಕರೆನ್ಸಿಯನ್ನು ಮೀಸಲಾಗಿ ಇಡಬೇಕಾಗುತ್ತದೆ. ಇದರ ಆಧಾರದ ಮೇಲೆ ಮೀಸಲು ಕರೆನ್ಸಿಯ ಮೌಲ್ಯ ನಿಗದಿಯಾಗುತ್ತದೆ. ಪ್ರಮುಖವಾಗಿ ಚಿನ್ನ, ತೈಲೋತ್ಪನ್ನಗಳ ಬೆಲೆ ನಿಗದಿಪಡಿಸುವಾಗ, ಮೀಸಲಿಟ್ಟ ಅಂತಾರಾಷ್ಟ್ರೀಯ ಕರೆನ್ಸಿಯ ಪ್ರಮಾಣವನ್ನು ಪರಿಗಣಿಸಲಾಗುವುದು.