ಲಾಸೇಂಜಲೀಸ್: ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದ ಶೂಟೌಟ್ ನಲ್ಲಿ ೧೪ ಜನರನ್ನು ಹತ್ಯೆ ಮಾಡಿದ ಇಬ್ಬರು ಶಂಕಿತರಲ್ಲಿ ಒಬ್ಬನ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಸಿ ಎನ್ ಎನ್ ವರದಿ ಮಾಡಿದೆ.
ಇಬ್ಬರು ಶಂಕಿರನ್ನು ಪೊಲೀಸರು ಹತ್ಯೆಗೈದಿದ್ದಾರೆ. ಅವರಲ್ಲಿ ಒಬ್ಬನನ್ನು ಸಯ್ಯದ್ ಫಾರುಕ್ ಎಂದು ಗುರುತಿಸಲಾಗಿದ್ದು ಅವನನ್ನು ಮತ್ತು ಅವನ ಪತ್ನಿಯನ್ನು ಕುಟುಂಬ ವರ್ಗ ಬುಧವಾರದ ಬೆಳಗ್ಗೆಯಿಂದ ಪತ್ತೆ ಹಚ್ಚಲು ಪ್ರಯತ್ನಿಸುತ್ತಿತ್ತು ಎಂದು ತಿಳಿದುಬಂದಿದೆ.
ಸ್ಯಾನ್ ಬರ್ನಾರ್ಡಿನೊ ನಗರದಲ್ಲಿ ಬುಧವಾರ ಬೆಳಗ್ಗೆ ಶಂಕಿತ ಪುರುಷ ಮತ್ತು ಮಹಿಳೆ ನಡೆಸಿದ ಗುಂಡಿನ ದಾಳಿಗೆ ೧೪ ಜನ ಮೃತಪಟ್ಟು ೧೭ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ನಂತರ ಪೊಲೀಸರೊಂದಿಗಿನ ಗುಂಡಿನ ಕಾಳಗದಲ್ಲಿ ಶಂಕಿತರು ಮೃತಪಟ್ಟಿದ್ದರು.
ಇದಕ್ಕೆ ಕಾರಣ ಇನ್ನು ತಿಳಿದುಬಂದಿಲ್ಲ. ಇದು ಭಯೋತ್ಪಾದಕ ಕೃತ್ಯವೋ ಅಥವಾ ಅಮೆರಿಕಾದಲ್ಲಿ ಹೆಚ್ಚುತ್ತಿರುವ ಗನ್ ಸಂಸ್ಕೃತಿಯ ದುಷ್ಪರಿಣಾಮವೋ ಎಂಬುದು ತಿಳಿದುಬಂದಿಲ್ಲ. "ಇಂತಹ ಘಟನೆಗಳು ಸಂಭವಿಸಿದಾಗ ದೊಡ್ಡ ಪ್ರಶ್ನೆ ಏಳುತ್ತದೆ. ಇದು ಭಯೋತ್ಪಾದಕ ಕೃತ್ಯವೇ? ಎಂಬುದು. ಇದನ್ನು ಸದ್ಯಕ್ಕೆ ಧೃಢೀಕರಿಸಲು ಸಾಧ್ಯವಿಲ್ಲ" ಎಂದು ಎಫ್ ಬಿ ಐ ಅಧಿಕಾರಿ ಡೇವಿಡ್ ಬೌಡಿಚ್ ವರದಿಗಾರರಿಗೆ ತಿಳಿಸಿದ್ದಾರೆ.