ವಾಷಿಂಗ್ಟನ್: 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತದ ಎದುರು ಹೀನಾಯ ಸೋಲು ಕಂಡಿದ್ದ ಪಾಕಿಸ್ತಾನ, ತನ್ನ ಸೋಲು ಖಚಿತವಾಗುತ್ತಿದ್ದಂತೆಯೇ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗಿಸುವ ಸಿದ್ಧತೆ ನಡೆಸಿತ್ತು ಎಂಬ ವಿಷಯ ಬಹಿರಂಗವಾಗಿದೆ.
ಅಣ್ವಸ್ತ್ರಗಳ ಸಂಭಾವ್ಯ ಬಳಕೆಗಾಗಿ ಪಾಕಿಸ್ತಾನ ಅಣ್ವಸ್ತ್ರಗಳನ್ನು ನಿಯೋಜಿಸಿದ್ದರ ಬಗ್ಗೆ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಗೆ ಸಿಐಎ ಎಚ್ಚರಿಸಿತ್ತು ಎಂದು ಶ್ವೇತ ಭವನದ ಮಾಜಿ ಅಧಿಕಾರಿ ಹೇಳಿಕೆ ನೀಡಿದ್ದಾರೆ. 1999 ರ ಜುಲೈ 4 ರಂದು ಅಮೆರಿಕದ ಅಧ್ಯಕ್ಷರನ್ನು ಅಂದಿನ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಭೇಟಿ ಮಾಡಬೇಕಿತ್ತು. ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷರಿಗೆ ಸ೦ಕ್ಷಿಪ್ತ ವಿವರ ನೀಡಿದ್ದ ಅಧಿಕಾರಿಗಳು ಪಾಕಿಸ್ತಾನ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗಿಸಲು ಸಿದ್ಧತೆ ನಡೆಸಿದೆ ಎಂದು ಎಚ್ಚರಿಸಿದ್ದರು ಎಂದು ಶ್ವೇತ ಭವನದ ಮಾಜಿ ಅಧಿಕಾರಿ ಹೇಳಿದ್ದಾರೆ.
ಭಾರತದ ಎದುರು ಸೋಲುವುದು ನಿಶ್ಚಿತವಾಗುತ್ತಿದ್ದಮ್ತೆಯೇ ಜಾಗತಿಕ ಮಟ್ಟದಲ್ಲಿ ಉಂಟಾಗುವ ಅವಮಾನದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಯುದ್ಧವನ್ನು ನಿಲ್ಲಿಸಲು ಸಹಾಯ ಮಾಡುವಂತೆ ಅಂದಿನ ಪಾಕ್ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಅಮೆರಿಕ ಅಧ್ಯಕ್ಷರ ನೆರವು ಕೇಳಿದ್ದರು.
ಅಮೆರಿಕ ಅಧ್ಯಕ್ಷರೊಂದಿಗೆ ಪಾಕ್ ಪ್ರಧಾನಿಯನ್ನು ಭೇಟಿ ಮಾಡಲಿದ್ದ ರಾಷ್ಟ್ರೀಯ ಭದ್ರತಾ ಮಂಡಳಿಯ ಬ್ರೂಸ್ ರಿಡೆಲ್ ಅವರಿಗೆ ಪಾಕ್ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗಿಸಲು ಮುಂದಾಗಿರುವ ಮಾಹಿತಿಯನ್ನು ತಲುಪಿಸಲಾಗಿತ್ತು. ಈ ವಿಷಯವನ್ನು ಅಮೆರಿಕ ಅಧ್ಯಕ್ಷರ ಗಮನಕ್ಕೂ ತರಲಾಗಿತ್ತು. ಷರೀಫ್ ಅವರೊಂದಿಗೆ ಮಾತುಕತೆ ನಡೆಸುವ ವೇಳೆ ಸ್ಥಿರವಾಗಿರುವಂತೆ ಅಮೆರಿಕ ಅಧ್ಯಕ್ಷರಿಗೆ ಸಲಹೆ ನೀಡಲಾಗಿತ್ತು. ಅಂತೆಯೇ ಯುದ್ಧ ಕೊನೆಯಾಗಬೇಕಾದರೆ ಪಾಕಿಸ್ತಾನ ಹಿಂದೆಸರಿಯಬೇಕೆಂದು ಅಮೆರಿಕ ಅಧ್ಯಕ್ಷರು ಸಲಹೆ ನೀಡಿದ್ದರು. ಅಮೆರಿಕ ಅಧ್ಯಕ್ಷರ ಸಲಹೆಗೆ ಮಣಿದ ಪಾಕಿಸ್ತಾನ ತನ್ನ ಪಡೆಗಳನ್ನು ವಾಪಸ್ ಕರೆಸಿಕೊಂಡಿತ್ತು ಎಂದು ಅಮೆರಿಕ ಶ್ವೇತ ಭವನ ಅಧಿಕಾರಿ ಹೇಳಿದ್ದಾರೆ.