ವಿದೇಶ

ನೇಪಾಳದ ಭಾರತೀಯ ರಾಯಭಾರಿ ಕಚೇರಿ ಎದುರು ಪ್ರತಿಭಟನೆ: 40 ಮಂದಿ ಬಂಧನ

Srinivas Rao BV

ಕಠ್ಮಂಡು: ನೇಪಾಳಕ್ಕೆ ಪೂರೈಕೆಯಾಗಬೇಕಿದ್ದ ಸರಕುಗಳು ಭಾರತ- ನೇಪಾಳ ಗಡಿಯಲ್ಲೇ ಸ್ಥಗಿತಗೊಂಡಿರುವುದರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ  ನೇಪಾಳಿ ಮಾನವ ಹಕ್ಕುಗಳ 40 ಕಾರ್ಯಕರ್ತರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.
ನೇಪಾಳದಲ್ಲಿರುವ ಭಾರತದ ರಾಯಭಾರಿ ಕಚೇರಿಯ ಎದುರು ಜಮಾಯಿಸಿದ ಮಾನವಹಕ್ಕುಗಳ ಕಾರ್ಯಕರ್ತರು, ಭಾರತದಿಂದ ನೇಪಾಳಕ್ಕೆ ಪೂರೈಕೆಯಾಗಬೇಕಿದ್ದ ಅಗತ್ಯ ಸರಕುಗಳನ್ನು ಗಡಿ ಭಾಗದಲ್ಲೇ ತಡೆಹಿಡಿಯಲಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದರು. ಭಾರತ ಸರ್ಕಾರ ವಾಣಿಜ್ಯ ಪ್ರತಿಬಂಧಕ ಕ್ರಮವನ್ನು ಅನುಸರಿಸುತ್ತಿರುವುದು ಸರಿಯಲ್ಲ. ಭಾರತ ಸರ್ಕಾರದ ಕ್ರಮ ಮಾನವ ಹಕ್ಕುಗಳ ಉಲ್ಲಂಘನೆ. ಮೋದಿ ಜಿ ಸರಕುಗಳ ತಡೆಯನ್ನು ಹಿಂಪಡೆಯಿರಿ, ನೇಪಾಳದ ಸಾರ್ವಭೌಮತ್ವವನ್ನು ಗೌರವಿಸಿ ಎಂದು ಘೋಷಣೆ ಕೂಗಿದರು.
ಭಾರತದ ರಾಯಭಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದ್ದ ಕಾರ್ಯಕರ್ತ ಕೃಷ್ಣಾ ಪಹಾಡಿ ಸೇರಿದಂತೆ 40 ಜನರನ್ನು ಬಂಧಿಸಲಾಗಿದೆ. ನೇಪಾಳದಲ್ಲಿ ಜಾರಿಯಾಗಿರುವ ನೂತನ ಸಂವಿಧಾನದಲ್ಲಿ ಮಾದೇಶಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ನೇಪಾಳ- ಭಾರತ ಗಡಿ ಭಾಗದಲ್ಲಿರುವ ಮಾದೇಶಿ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನೇಪಾಳಕ್ಕೆ ಪೂರೈಕೆಯಾಗಬೇಕಿದ್ದ ಸರಕುಗಳು ಗಡಿ ಭಾಗದಲ್ಲೇ ಸ್ಥಗಿತಗೊಂಡಿವೆ.

SCROLL FOR NEXT