ವಿದೇಶ

ದಾವೂದ್ ಸಾಮ್ರಾಜ್ಯಕ್ಕೆ ಶಕೀಲ್ ಉತ್ತರಾಧಿಕಾರಿ?

Mainashree
ಮುಂಬೈ: ರಾಜಕೀಯ ಪಕ್ಷಗಳ ನೇತಾರರು ತಮ್ಮ ಉತ್ತ ರಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಪರಿಪಾಠ ಎಲ್ಲರಿಗೂ ಗೊತ್ತು. ಆದರೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ತನ್ನ ಅಪರಾಧ ಲೋಕಕ್ಕೆ ಉತ್ತರಾಧಿಕಾರಿ ನೇಮಕ ಮಾಡಲಿದ್ದಾನಂತೆ. 
ಅದೂ ಶನಿವಾರ ಆಯೋಜನೆ ಮಾಡಿರುವ ತನ್ನ 60ನೇ ಹುಟ್ಟುಹಬ್ಬ ಆಚರಣೆ ವೇಳೆ! `ಮುಂಬೈ ಮಿರರ್' ವರದಿ ಮಾಡಿರುವ ಪ್ರಕಾರ ಡಿ ಗ್ರೂಪ್‍ನ ಸಿಇಒ ಎಂದೇ ಕರೆಸಿ ಕೊಳ್ಳುವ ದಾವುದ್‍ನ ಪರಮಾಪ್ತ ಛೋಟಾ ಶಕೀಲ್ ಪಾತಕ ಸಾಮ್ರಾಜ್ಯಕ್ಕೆ ಉತ್ತರಾಧಿಕಾರಿಯಾಗಲಿದ್ದಾನೆ ಎನ್ನುತ್ತಿವೆ ಮೂಲಗಳು. ಆದರೆ, ಈ ವಿಚಾರದ ಕುರಿತು ಮುಂಬೈನಲ್ಲಿರುವ ಡಿ ಗ್ರೂಪ್ ಹಿಂಬಾಲಕರಿಗೆ, ಆತನ ಸಹಚರರಿಗೆ ಬುಧವಾರ ಸಂಜೆಯ ವರೆಗೆ ಮಾಹಿತಿಯೇ ಇಲ್ಲವಂತೆ. 
ಹದಗೆಟ್ಟಿದೆ ಆರೋಗ್ಯ: ಮಾದಕ ವಸ್ತು ಮಾರಾಟ, ಸುಪಾರಿ ಕೊಲೆ, ಹವಾಲ ಮುಂತಾದ ಕುಕೃತ್ಯಗಳ ಮೂಲಕ ದಾವುದ್ ಕೋಟ್ಯಂತರ ಮೌಲ್ಯದ ಸಂಪತ್ತು ಗಳಿಸಿದ್ದಾನೆ. 60 ವರ್ಷದ ಡಾನ್ ಆರೋಗ್ಯ ದಿನೇ ದಿನೆ ಹದಗೆಡುತ್ತಿದೆ. ಆತನ ಸಾಮ್ರಾಜ್ಯ ವನ್ನು ನಿಭಾಯಿಸಲು ಒಬ್ಬ ನಂಬಿಕಸ್ಥನ ಅಗತ್ಯವಿದೆ. ಹೀಗಾಗಿಯೇ ಉತ್ತರಾಧಿಕಾರಿ ಯನ್ನು ನೇಮಿಸಿಕೊಳ್ಳಲು ಮುಂದಾಗಿದ್ದಾನೆ ಎನ್ನಲಾಗಿದೆ.
ಆಮಂತ್ರಣ ಸಿಕ್ಕವರಿಗೂ ಗೊತ್ತಿಲ್ಲ ಜಾಗ: ದಾವುದ್‍ನ ಹುಟ್ಟು ಹಬ್ಬ ಡಿ.26ರಂದು ಕರಾಚಿಯಲ್ಲಿ ನಡೆಯಲಿದೆ. ಈ ಕುರಿತು ದಾವುದ್‍ನ ಆಯ್ದ ಕೆಲ ಆಪ್ತರಿಗಷ್ಟೇ ಆಮಂತ್ರಣ ಬಂದಿದೆ. ಹುಟ್ಟುಹಬ್ಬ ಸಮಾರಂ ಭ ಕರಾಚಿಯಲ್ಲಿ ನಡೆಯುತ್ತಿದೆ ಎಂದು ಇವರಿಗೆ ಗೊತ್ತಷ್ಟೇ. ಆದರೆ, ಕರಾಚಿಯ ಯಾವ ಜಾಗದಲ್ಲಿ ನಡೆಯುತ್ತಿದೆ ಎಂಬುದೇ ಇವರಿಗೆ ಗೊತ್ತಿಲ್ಲ. 
ಸಮಾರಂಭಕ್ಕೆ ಬರುತ್ತಿರುವವರಿಗೆ ಕರಾಚಿಯ ಹೊಟೇಲ್ ಗಳಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಸಮಾರಂಭ ಆರಂಭವಾಗುವುದಕ್ಕೂ ಕೆಲ ನಿಮಿಷಗಳಿಗೆ ಮುನ್ನ ಅತಿಥಿಗಳನ್ನೆಲ್ಲ ಹೊಟೇಲ್ಗಳಿಂದ ನಿಗದಿತ ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ. 
ಆ ಮಟ್ಟಿಗೆ ಸಮಾರಂಭದ ಸ್ಥಳವನ್ನು ಗೌಪ್ಯವಾಗಿಟ್ಟಿದೆ ಡಿ ಗ್ರೂಪ್. ಹೊಸ ಬದುಕು ಆರಂಭಿಸುವಂತೆ ದಾವುದ್‍ಗೆ ಪತ್ನಿ ಮೆಹ್ಜಾಬೀನ್ ಒತ್ತಡ ಹಾಕುತ್ತಿದ್ದಳು. ಆತನ ಇಬ್ಬರು ಮಕ್ಕಳೂ ಇದೇ ರೀತಿಯ ಸಲಹೆ ನೀಡಿದ್ದರು. ಹೀಗಾಗಿಯೇ ಆತ ಭೂಗತ ಚಟುವಟಿಕೆಗಳನ್ನು ಕಡಿಮೆ ಮಾಡಿಕೊಳ್ಳಲು ಮುಂದಾಗಿದ್ದಾನೆ ಎಂದು ಪತ್ರಿಕೆ ವರದಿ ಮಾಡಿದೆ.
SCROLL FOR NEXT