ಜೋಸ್(ನೈಜೀರಿಯಾ): ಬೋಕೋ ಹರಾಮ್ ಉಗ್ರ ಸಂಘಟನೆ ನಡೆಸಿದ ಅವಳಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 44 ಮಂದಿ ಸಾವನ್ನಪ್ಪಿದ್ದಾರೆ.
ಜನದಟ್ಟಣೆ ಹೆಚ್ಚಾಗಿರುವ ಮಸೀದಿ ಹಾಗೂ ರೆಸ್ಟೋರೆಂಟ್ ಗಳಲ್ಲಿ ಎರಡು ಬಾಂಬ್ ಸ್ಫೋಟಗಳು ಸಂಭವಿಸಿದ್ದು ಪರಿಣಾಮ 44 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಅವಳಿ ಸ್ಫೋಟದಲ್ಲಿ 67ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿದ್ದಾರೆ.
ರಂಜಾನ್ ಮಾಸದ ಹಿನ್ನೆಲೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಯಂತಾಯಾ ಮಸೀದಿಯಲ್ಲಿ ಜನರು ಸೇರಿದ್ದು ಈ ವೇಳೆ ಬಾಂಬ್ ಸ್ಫೋಟ ಸಂಭವಿಸಿದ್ದು, ಹೆಚ್ಚು ಸಾವು ನೋವು ಸಂಭವಿಸಿದೆ
ಗಣ್ಯರು ಮತ್ತು ದೊಡ್ಡ ರಾಜಕಾರಣಿಗಳು ಹೆಚ್ಚಾಗಿ ಬರುವ ಪ್ರತಿಷ್ಠಿತ ಶಾಗಲಿಂಕು ಎಂಬ ರೆಸ್ಟೋರೆಂಟ್'ನಲ್ಲೂ ಬಾಂಬ್ ಸ್ಫೋಟ ಸಂಭವಿಸಿದೆ. ಆದರೆ, ಈ ಘಟನೆಯಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆಂಬ ನಿಖರ ಮಾಹಿತಿ ಲಭ್ಯವಿಲ್ಲ.
ನೈಜೀರಿಯಾದಲ್ಲಿ ಉತ್ತರ ಭಾಗದಲ್ಲಿರುವ ಜೋಸ್ ನಗರದಲ್ಲಿ ಮುಸ್ಲಿಂ ಅಧಿಪತ್ಯ ಹೆಚ್ಚಾಗಿದ್ದು, ಇಲ್ಲಿ ಕ್ರೈಸ್ತರೂ ಕೂಡ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಎರಡು ಕೋಮುಗಳ ನಡುವೆ ಆಗಾಗ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ಇಸ್ಲಾಮೀ ಭಯೋತ್ಪಾದಕ ಸಂಘಟನೆಯಾದ ಬೋಕೋ ಹರಾಮ್ ನ ಉಗ್ರರು ಕೆಲವಾರು ವರ್ಷಗಳಿಂದ ನೈಜೀರಿಯಾದಲ್ಲಿ ನೂರಾರು ಜನರನ್ನು ಹತ್ಯೆಗೈದಿದ್ದಾರೆ.