ಲಂಡನ್: 14 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗುವ ಆರೋಪದ ಮೇಲೆ ಲಂಡನ್ ನಲ್ಲಿ ಭಾರತೀಯ ಮೂಲದ ಹಿರಿಯ ಪತ್ರಕರ್ತನನ್ನು ಬಂಧಿಸಲಾಗಿದೆ.
ಲಂಡನ್ನಲ್ಲಿ ಖಾಸಗಿ ವಾಹಿನಿಯೊಂದು ನಡೆಸಿದ ಕುಟುಕು ಕಾರ್ಯಾಚರಣೆಯೊಂದರಲ್ಲಿ ಭಾರತೀಯ ಮೂಲದ ಬ್ರಿಟಿಷ್ ಪತ್ರಕರ್ತ ಹಸನ್ ಸುರೂರ್ ಬಾಲಕಾಮ (ಪಾಯೆಡೊಫಿಲಿಯಾ) ಸಿಕ್ಕಿಬಿದ್ದಿದ್ದು, ಪತ್ರಕರ್ತ ಹಸನ್ ಸುರೂರ್ ಅವರನ್ನು ಬ್ರಿಟಿಷ್ ಟ್ರಾನ್ಸ್ಪೋರ್ಟ್ ಪೊಲೀಸರು (ಬಿಟಿಪಿ) ಬಂಧಿಸಿದ್ದಾರೆ.
ಲಂಡನ್ ನ "ಅನ್ನೌನ್ ಟಿವಿ" ಸಿಬ್ಬಂದಿಗಳು ನಡೆಸಿದ್ದ ಕುಟುಕು ಕಾರ್ಯಾಚರಣೆಯಲ್ಲಿ 14 ವರ್ಷದ ಬಾಲಕಿಗಾಗಿ ಪತ್ರಕರ್ತ ಸುರೂರ್ ಕಾಯುತ್ತಾ ಇರುವ ದೃಶ್ಯ ದಾಖಲಾಗಿತ್ತು. ಅಲ್ಲದೆ ತಾವು ಸಿಕ್ಕಿಹಾಕಿಕೊಂಡ ಬಳಿಕ ಸುರೂರ್ ಕೂಗಾಡಿದ್ದು ಕೂಡ ಕ್ಯಾಮರಾದಲ್ಲಿ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ. ‘65ರ ಹರೆಯದ ಸುರೂರ್ ವಿರುದ್ಧ 14ರ ಹರೆಯದ ಬಾಲಕಿಯನ್ನು ಭೇಟಿ ಮಾಡಿ ಲೈಂಗಿಕ ಸಂಪರ್ಕಕ್ಕೆ ಯತ್ನಿಸಿದ ಆರೋಪ ದಾಖಲಿಸಲಾಗಿದೆ’ ಎಂದು ಬಿಟಿಪಿ ವಕ್ತಾರರು ತಿಳಿಸಿದ್ದಾರೆ. ಸುರೂರ್ ಅವರನ್ನು ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ನವೆಂಬರ್ 12ರಂದು ಹಾಜರುಪಡಿಸಲಾಗುವುದು ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ‘ಅನ್ನೌನ್ ಟಿವಿ’ ಎಂದೇ ಹೆಸರಾಗಿರುವ ಬಾಲಕಾಮ ವಿರೋಧಿ ಜಾಗೃತ ಸಮೂಹದ ಸದಸ್ಯರೊಬ್ಬರು 14ರ ಹರೆಯದ ಬಾಲಕಿ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮದ ಮೂಲಕ ಸುರೂರ್ ಅವರನ್ನು ಸಂರ್ಪಸಿದ್ದರು. ಅಪ್ರಾಪ್ತ ವಯಸ್ಕರನ್ನು ಭೇಟಿ ಮಾಡಿ ಲೈಂಗಿಕ ತೃಷೆ ತೀರಿಸಿಕೊಳ್ಳಲು ಬಯಸುವ ವಯಸ್ಕರ ಮೇಲೆ ಕಣ್ಣಿಡುವ ಸಲುವಾಗಿಯೇ ‘ಅನ್ನೌನ್ ಟಿವಿ’ ಸಮೂಹದ ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಾಪ್ತ ಬಾಲಕಿಯರೆಂದು ಹೇಳಿಕೊಂಡು ಇಂತಹ ವ್ಯಕ್ತಿಗಳ ಸಂಪರ್ಕ ಬೆಳೆಸಿ ಅವರನ್ನು ಸಿಕ್ಕಿಸಿಹಾಕುವ ಕಾರ್ಯಾಚರಣೆ ನಡೆಸುತ್ತಾರೆ ಎಂದು ವರದಿಗಳು ಹೇಳಿವೆ.