ಸಿಡ್ನಿ: ಜನಾಂಗೀಯ ನಿಂದನೆ ಪ್ರಕರಣಗಳಿಗಾಗಿ ಆಗಾಗ ಸುದ್ದಿಯಾಗುವ ಆಸ್ಟ್ರೇಲಿಯಾದಲ್ಲಿ ಇದೀಗ ಇಂತಹ ಮತ್ತೊಂದು ಪ್ರಕರಣ ನಡೆದಿದೆ. ಅದರಲ್ಲೂ, ಈ ಘಟನೆ ನಡೆದಿರುವುದು ಬೇರೆಲ್ಲೂ ಅಲ್ಲ, ಆ್ಯಪಲ್ ಕಂಪನಿಯ ಮಳಿಗೆಯಲ್ಲಿ.
ಆ್ಯಪಲ್ ಮಳಿಗೆಯನ್ನು ಪ್ರವೇಶಿಸಿದ್ದ ಆಫ್ರಿಕಾದ 6 ಮಂದಿ ವಿದ್ಯಾರ್ಥಿಗಳನ್ನು ಮಳಿಗೆಯಿಂದ ಹೊರಹಾಕಲಾಗಿದೆ. ಅವರು ಏನನ್ನಾದರೂ ಕದಿಯುವ ಸಾಧ್ಯತೆಯಿದೆ ಎಂದು ಈ ಕ್ರಮ ಕೈಗೊಂಡಿದ್ದಾಗಿ ಮಳಿಗೆಯ ಸಿಬ್ಬಂದಿ ಸ್ಪಷ್ಟನೆಯನ್ನೂ ನೀಡಿದ್ದಾರೆ.
ವಿದ್ಯಾರ್ಥಿಗಳೊಂದಿಗೆ ಆ್ಯಪಲ್ ಸಿಬ್ಬಂದಿಯು ಮಾತಿನ ಚಕಮಕಿ ನಡೆಸುತ್ತಿರುವ ದೃಶ್ಯವನ್ನು ಮೇರಿಬಿರ್ನಾಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬ ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದೆ.
ಫೇಸ್ ಬುಕ್‍ಗೆ ಈ ವಿಡಿಯೇ ಅಪ್‍ಲೋಡ್ ಆದ ಎರಡೇ ದಿನಗಳಲ್ಲಿ 60 ಸಾವಿರ ಮಂದಿ ಇದನ್ನು ವೀಕ್ಷಿಸಿದ್ದಾರೆ. ಅಲ್ಲದೆ, ತೀವ್ರ ಆಕ್ಷೇಪವೂ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆ್ಯಪಲ್ ಮಾ್ಯನೇಜರ್ ನೊಂದ ವಿದ್ಯಾರ್ಥಿಗಳ ಕ್ಷಮೆ ಯಾಚಿಸಿದ್ದಾರೆ.
ಆ್ಯಪಲ್ ಸಿಇಒ ಟಿಮ್ ಕುಕ್ ಅವರ ವೆಬ್‍ಸೈಟ್‍ನಲ್ಲಿ, ನಾವು ಜನಾಂಗ, ಲಿಂಗ, ಪ್ರಾದೇಶಿಕತೆ, ಧರ್ಮ ಯಾವುದನ್ನೂ ಲೆಕ್ಕಿ ಸದೇ ಸಮಾನತೆಯನ್ನಷ್ಟೇ ನಂಬುತ್ತೇವೆ. ಮಳಿಗೆಗೆ ಭೇಟಿ ನೀಡುವ ಎಲ್ಲ ಗ್ರಾಹಕರನ್ನೂ ಸ್ವಾಗತಿಸುತ್ತೇವೆ'' ಎಂಬ ಸಂದೇಶವಿದೆ. ಹೀಗಿದ್ದಾಗ್ಯೂ, ಇಂತಹ ಘಟನೆ ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ.