ಲಂಡನ್: 'ಭಾರತವು ಗೌತಮ ಬುದ್ಧ ಹಾಗೂ ಗಾಂಧಿ ನಾಡು. ನಮ್ಮ ಸಮಾಜದಲ್ಲಿ ಅಸಾಂವಿಧಾನಿಕವಾದುದನ್ನು ನಾವು ಒಪ್ಪುವುದಿಲ್ಲ. ಪ್ರತಿಯೊಬ್ಬ ನಾಗರಿಕನ ಸ್ವಾತಂತ್ರ್ಯವನ್ನು ರಕ್ಷಿಸುವಲ್ಲಿ ಭಾರತ ಬದ್ಧವಾಗಿದೆ.'' ಇದು ಬ್ರಿಟನ್‍ನಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಸಹಿಷ್ಣುತೆಗೆ ಸಂಬಂಧಿಸಿ ಆಡಿದ ಮಾತು.
ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಜತೆಗೆ ನಡೆದ ದ್ವಿಪಕ್ಷೀಯ ಮಾತುಕತೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮೋದಿ ಹೀಗಂದರು. ಬಿಬಿಸಿ ವರದಿಗಾರರೊಬ್ಬರು ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಬಗ್ಗೆ ನೇರ ಪ್ರಶ್ನೆಯೆತ್ತಿದ್ದು, ಅದಕ್ಕೆ ಉತ್ತರಿಸಿದ ಮೋದಿ, 'ಸಣ್ಣದಾಗಿರಲೀ, ದೊಡ್ಡದಾಗಿರಲೀ ಭಾರತದಲ್ಲಾಗುವ ಪ್ರತಿಯೊಂದು ಘಟನೆಯನ್ನೂ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ ಎಂದರು.
'ಮೋದಿ ವಿರುದ್ಧ ಗುಜರಾತ್ ಗಲಭೆಯ ಆರೋಪವಿರುವಾಗ ಅವರನ್ನು ನೀವು ಹೇಗೆ ಸ್ವಾಗತಿಸುತ್ತೀರಿ' ಎಂಬ ಪ್ರಶ್ನೆಗೆ ಉತ್ತರಿಸಿದ ಬ್ರಿಟನ್ ಪಿಎಂ 'ಗುಜರಾತ್ ಗಲಭೆಗೆ ಸಂಬಂಧಿಸಿ ಭಾರತದ ನ್ಯಾಯಾಲಯಾ ಗಳು ಪ್ರಕರಣದ ವಿಚಾರಣೆ ನಡೆಸಿವೆ,'' ಎಂದು ಅವರು ಹೇಳಿದರು.
ಪರಮಾಣು ಒಪ್ಪಂದಕ್ಕೆ ಸಹಿ: ಮಾತುಕತೆ ಬಳಿಕ ಭಾರತ ಮತ್ತು ಬ್ರಿಟನ್ 9 ಶತಕೋಟಿ ಪೌಂಡ್ ಗಳ ಪಾಲುದಾರಿಕೆಯನ್ನು ಘೋಷಿಸಿದವು. ಜತೆಗೆ, ಎರಡೂ ರಾಷ್ಟ್ರಗಳು ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿಯನ್ನೂ ಹಾಕಿದವು. ಇದು ಪರಸ್ಪರ ವಿಶ್ವಾಸದ ಸಹಿ ಎಂದು ಮೋದಿ ಬಣ್ಣಿಸಿದರು. ಜತೆಗೆ, ಭಾರತೀಯ ರೈಲ್ವೆಗಾಗಿ ಲಂಡನ್‍ನಲ್ಲಿ ರೈಲ್ವೆ ರುಪೀ ಬಾಂಡ್ ಅನ್ನು ಆರಂಭಿಸುತ್ತಿರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ ಎಂದೂ ಮೋದಿ ತಿಳಿಸಿದರು. ಏತನ್ಮಧ್ಯೆ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯುವ ಭಾರತದ ಬೇಡಿಕೆಗೆ ಬೆಂಬಲ ನೀಡುವುದಾಗಿ ಬ್ರಿಟನ್ ಘೋಷಿಸಿದೆ.