ಪ್ಯಾರಿಸ್ :ಪ್ಯಾರಿಸ್‌ನಲ್ಲಿ ಬುಧವಾರ ಉಗ್ರರ ವಿರುದ್ಧ ಶೋಧ ಕಾರ್ಯಾಚರಣೆಗಿಳಿದ ಪೊಲೀಸರು ಗುಂಡಿನ ದಾಳಿ ಮುಂದುವರಿಸಿದ್ದಾರೆ. ಪೊಲೀಸ್ ಕಾರ್ಯಾಚರಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಶಂಕಿತ ಉಗ್ರರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಸೈಂಟ್ ಡೇನಿಸ್ ಪ್ರದೇಶದಲ್ಲಿ ಫ್ರಾನ್ಸ್ ಕಾಲಮಾನ ಬೆಳಗಿನ ಜಾವ 4.25 ರ ವೇಳೆಗೆ ವಿಶೇಷ ಪೊಲೀಸ್ ಸಶಸ್ತ್ರ ಪಡೆಗಳು ಕಾರ್ಯಾಚರಣೆಗಿಳಿದಿದ್ದು ಅಪಾರ್ಟ್ ಮೆಂಟ್ ಒಂದರಲ್ಲಿ ಅಡಗಿದ್ದ ಶಂಕಿತ ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆಸಿದ ಬಗ್ಗೆ ವರದಿಯಾಗಿದೆ.
ಇನ್ನು ಮೃತ ಉಗ್ರರಲ್ಲಿ ಆತ್ಮಾಹುತಿ ಬಾಂಬ್ ಧರಿಸಿದ್ದ ಮಹಿಳೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಕೆಲ ವರದಿಗಳ ಪ್ರಕಾರ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಹತ್ಯೆಗೀಡಾಗಿದ್ದು, ಓರ್ವ ಫ್ರಾನ್ಸ್ ಪೊಲೀಸ್ ಗಾಯಗೊಂಡಿರುವುದಾಗಿ ಹೇಳಲಾಗಿದೆ.
ಇನ್ನೂ ಪ್ಯಾರಿಸ್ ದಾಳಿಯ ಮಾಸ್ಟರ್ ಮೈಂಡ್ ಅಬ್ದಲ್ ಹಮೀದ್ ಅಬೌಡ್ ಗಾಗಿ ತೀವ್ರ ಶೋಧ ಮುಂದುವರಿದಿದೆ. ಈತ ಸಿರಿಯಾ ಉಗ್ರರ ಜೊತೆ ಸಂಪರ್ಕದಲ್ಲಿದ್ದಾನೆ ಎಂದು ಹೇಳಲಾಗಿದೆ.
ಬುಧವಾರ ಬೆಳಗ್ಗೆ ಪ್ಯಾರಿಸ್‌ನಿಂದ ಅಮೆರಿಕಾಕ್ಕೆ ತೆರಳಬೇಕಾಗಿದ್ದ 2 ವಿಮಾನಗಳು ಬಾಂಬ್ ಬೆದರಿಕೆ ಹಿನ್ನಲೆಯಲ್ಲಿ ಮಾರ್ಗ ಬದಲಾವಣೆ ಮಾಡಿವೆ.
ಶುಕ್ರವಾರ ಪ್ಯಾರಿಸ್‌ನಲ್ಲಿ ಐಸಿಸ್ ಉಗ್ರರು ಅಟ್ಟಹಾಸ ಮೆರೆದು 129 ಜನರ ಬಲಿ ಪಡೆದು, ಹಲವರು ಗಂಭೀರವಾಗಿ ಗಾಯಗೊಳ್ಳಲು ಕಾರಣರಾಗಿದ್ದರು. ಭೀಕರ ದಾಳಿಯ ಬಳಿಕ ಫ್ರಾನ್ಸ್‌ನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು ಉಗ್ರರ ವಿರುದ್ದ ವ್ಯಾಪಕ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.