ವಾಷಿಂಗ್ಟನ್: ತಂದೆಯಾಗುವ ಸಂತಸದಲ್ಲಿರುವ ಫೇಸ್‍ಬುಕ್ ಸಂಸ್ಥಾಪಕ ಮಾರ್ಕ್ ಝುಕರ್‍ಬರ್ಗ್ 2 ತಿಂಗಳು ರಜೆ ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ಪತ್ನಿ ಪ್ರಿಸಿಲ್ಲಾ ಚಾನ್ ಹೆಣ್ಣುಮಗುವಿಗೆ ಜನ್ಮ ನೀಡಲಿದ್ದು, ಅಂದಿನಿಂದ 2 ತಿಂಗಳು ಪಿತೃತ್ವ ರಜೆಯ ಮೇಲೆ ಆಫೀಸಿನಿಂದ ದೂರ ಇರುವುದಾಗಿ ಅವರು ಹೇಳಿದ್ದಾರೆ.
ಜಗತ್ತಿನ ಅತ್ಯಂತ ಬ್ಯುಸಿ ವ್ಯಕ್ತಿ ಹಾಗೂ ಅತಿ ದೊಡ್ಡ ಕಂಪನಿಯ ಮುಖ್ಯಸ್ಥರಾಗಿದ್ದೂ ಕುಟುಂಬಕ್ಕೆ ನೀಡುತ್ತಿರುವ ಸಮಯ, ಪ್ರಾಮುಖ್ಯತೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಪ್ರಶಂಲೆ ವ್ಯಕ್ತವಾಗಿದೆ. 31ರ ಹರೆಯದ ಝುಕರ್ ಬರ್ಗ್ ರ ಪತ್ನಿ ಗೆ ಈ ಮೊದಲು ಹಲವು ಬಾರಿ ಗರ್ಭಪಾತವಾಗಿದ್ದರಿಂದ ಈ ಬಾರಿ ಕುಟುಂಬದತ್ತ ಹೆಚ್ಚು ನಿಗಾವಹಿಸಿದ್ದಲ್ಲದೆ, ಕುಟುಂಬಕ್ಕೆ ನೀಡಬೇಕಾದ ಮಹತ್ವದ ಬಗ್ಗೆ ಇತರರಿಗೂ ತಿಳಿಸುವ ಪ್ರಯತ್ನ ಮಾಡಿದ್ದರು.
ಫೇಸ್ ಬುಕ್ ಉದ್ಯೋಗಿಗಳಿಗೆ 4 ತಿಂಗಳ ಪಿತೃತ್ವ ರಜೆಯ ಅವಕಾಶವಿದೆ. ಆದರೆ ಝುಕರ್ ಬರ್ಗ್ ಎರಡೇ ತಿಂಗಳ ರಜೆ ಪಡೆದು ಮಾದರಿಯಾಗಿದ್ದಾರೆ. ಉದ್ಯೋಗಿಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಬಹುತೇಕ ಸಾಫ್ಟ್ ವೇರ್ ಕಂಪನಿಗಳಲ್ಲಿ ಪಿತೃತ್ವ ರಜೆ ಮತ್ತು ಮಾತೃತ್ವ ರಜೆ ನೀಡುವ ವ್ಯವಸ್ಥೆ ಇದೆಯಾದರೂ ಫೇಸ್ ಬುಕ್ ಈ ವಿಷಯದಲ್ಲಿ ಹೆಚ್ಚು ಧಾರಾಳಿ ಎನಿಸಿಕೊಂಡಿದೆ.