ಸಿರಿಯಾ ಗಡಿಯಲ್ಲಿ ರಷ್ಯಾದ ಜೆಟ್ ಹೊಡೆದುರುಳಿಸಿದ ಟರ್ಕಿ
ವಿಶ್ವಸಂಸ್ಥೆ/ಮಾಸ್ಕೋ: ರಷ್ಯಾ ಯುದ್ಧ ವಿಮಾನ ಹೊಡೆದು ಉರುಳಿಸಿದ ಘಟನೆಯಿಂದ ಉಂಟಾಗಿರುವ ಬಿಗುವಿನ ಪರಿಸ್ಥಿತಿ ತಿಳಿಗೊಳಿಸಲು ಟರ್ಕಿ ಮುಂದಾಗಿದೆ.
ಇದರ ಜತೆಗೆ ತನ್ನ ವಿಮಾನ ಕೆಡವಿ ಹಾಕಿರುವುದು `ಪೂರ್ವ ನಿಯೋಜಿತ ತಂತ್ರ' ಎಂದು ರಷ್ಯಾ ಆರೋಪಿಸಿದೆ. ಮತ್ತೊಂದು ಬೆಳವಣಿಗೆಯಲ್ಲಿ ರಷ್ಯಾದ ಜತೆ ಸಂಘರ್ಷವನ್ನು ಬಯಸುವುದಿಲ್ಲ ಎಂದು ಟರ್ಕಿ ಹೇಳಿದೆ. ಸಂಘರ್ಷಮಯ ಸನ್ನಿವೇಶವನ್ನು ಹುಟ್ಟುಹಾಕುವ ಉದ್ದೇಶ ತನಗಿಲ್ಲ.
ಆದರೆ ನಮ್ಮ ಗಡಿಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬಯಸುತ್ತೇವೆ. ನಮ್ಮ ಭದ್ರತೆ, ಸಾರ್ವಭೌಮತೆಯನ್ನು ಪ್ರಶ್ನಿಸಿದರೆ ನಾವು ಸುಮ್ಮನಿರುವುದಿಲ್ಲ ಎಂದು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ದೊಗನ್ ಹೇಳಿದ್ದಾರೆ.
ಈ ನಡುವೆ, ರಷ್ಯಾದ ಯುದ್ಧವಿಮಾನವನ್ನು ಹೊಡೆದುರುಳಿಸಿದ ಟರ್ಕಿ ಸೇನೆಯ ಕ್ರಮದಿಂದ ಸ್ಥಳದಲ್ಲಿ ಬಿಗುವಿನ ಸನ್ನಿವೇಶ ಸೃಷ್ಟಿಯಾಗಿದ್ದು, ಸಿರಿಯಾದಲ್ಲಿ ತನ್ನ ಶಕ್ತಿಯುತವಾದ ವಾಯುರಕ್ಷಣಾ ನೆಲೆಯನ್ನು ಸ್ಥಾಪಿಸಲು ರಷ್ಯಾ ಮುಂದಾಗಿದೆ. ಸಿರಿಯಾದಲ್ಲಿ ತನ್ನ ಅತ್ಯಾಧುನಿಕ ವಾಯು ರಕ್ಷಣಾ ನೆಲೆಯನ್ನು ಸ್ಥಾಪಿಸಲು ರಷ್ಯಾ ಮುಂದಾಗಿದೆ.
ಸಿರಿಯಾದ ಮೀಮಿಮïನಲ್ಲಿ ಎಸ್-400 ವಿಮಾನ ಪ್ರತಿರೋಧ ಕ್ಷಿಪಣಿ ವ್ಯವಸ್ಥೆಯನ್ನು ನೆಲೆಗೊಳಿಸಲಾಗುವುದು ಎಂದು ರಷ್ಯಾದ ಸೇನಾಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ಇಸ್ಲಾಮಿಕ್ ಉಗ್ರರನ್ನು ಮಣಿಸಲು ಜಂಟಿ ಕಾರ್ಯಾಚರಣೆ ಮಾಡುವುದಾದರೆ ತಾನು ಅದಕ್ಕೆ ಸಿದ್ಧ ಎಂದು ರಷ್ಯಾ ಹೇಳಿದೆ.
ಬದುಕುಳಿದ ಇನ್ನೊಬ್ಬ ಪೈಲಟ್: ಟರ್ಕಿ ಹೊಡೆದುರುಳಿಸಿದ ಯುದ್ಧವಿಮಾನದಲ್ಲಿದ್ದ ಇನ್ನೊಬ್ಬ ಪೈಲಟ್ ಬದುಕುಳಿದಿದ್ದು, ಆತನನ್ನು ಸುರಕ್ಷಿತವಾಗಿ ಸಿರಿಯದ ಸೇನಾನೆಲೆಗೆ ತಲುಪಿಸಲಾಗಿದೆ ಎಂದು ರಷ್ಯಾ ಹೇಳಿದೆ. ಇನ್ನೊಬ್ಬ ಪೈಲಟ್ ಘಟನೆಯ ವೇಳೆ ನೆಲಕ್ಕಿಳಿದಿದ್ದರೂ, ಟರ್ಕಿ ಸೈನಿಕರಿಂದ ಹತನಾಗಿದ್ದ.