ಪಾರಿಸ್: ಅಭಿವೃದ್ಧಿ ಹೊಂದಿದ್ದ ರಾಷ್ಟ್ರಗಳು ತಮ್ಮ ಅಭ್ಯುದಯಕ್ಕಾಗಿ ಸಾಂಪ್ರದಾಯಿಕ ಇಂಧನ ಮೂಲಗಳನ್ನು ಬಳಸಿಕೊಂಡು, ಹೊರಸೂಸುವಿಕೆ ಹೊರೆಯನ್ನು ತಗ್ಗಿಸುವ ಹೊಣೆ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಹಾಕುವುದು 'ನೈತಿಕವಾಗಿ ತಪ್ಪು' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಇಂದು ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಹವಾಮಾನ ಬದಲಾವಣೆ ಶೃಂಗ ಸಭೆಯಲ್ಲಿ ಭಾಗವಹಿಸಿರುವ ಮೋದಿ ಅವರು, ಈ ವಿಚಾರದಲ್ಲಿ ಸಾಮೂಹಿಕ ಹೊಣೆಗಾರಿಕೆ ತತ್ವ ಅನುಸರಿಸಬೇಕು. ಇಲ್ಲದಿದ್ದರೆ ಅದು ನೈತಿಕವಾಗಿ ತಪ್ಪಾಗುತ್ತದೆ ಎಂದು ಫೈನಾನ್ಶಿಯಲ್ ಟೈಮ್ಸ್‌ನ ಅಭಿಪ್ರಾಯ ವಿಭಾಗದಲ್ಲಿ ಬರೆದಿದ್ದಾರೆ.
ಅಭಿವೃದ್ಧಿ ಹೊಂದಿದ ದೇಶಗಳು ಹವಾಮಾನ ಬದಲಾವಣೆ ವಿರುದ್ಧದ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಪ್ರಧಾನಿ ಮನವಿ ಮಾಡಿದ್ದಾರೆ.
ಶ್ರೀಮಂತ ರಾಷ್ಟ್ರಗಳು ಮನುಷ್ಯನ ಮೇಲಾಗುವ ಪರಿಣಾಮಗಳನ್ನು ಮರೆತು ಅಭಿವೃದ್ಧಿ ಚಟುವಟಿಕೆಯಲ್ಲಿ ತೊಡಗಿವೆ. ಇದರಿಂದ ಜಾಗತಿಕ ತಾಪಮಾನ ಹೆಚ್ಚುತ್ತಿದೆ ಎಂದು ಮೋದಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹವಾಮಾನ ಬದಲಾವಣೆ ಅಥವಾ ಜಾಗತಿಕ ತಾಪಮಾನ ಏರಿಕೆ ಕುರಿತ ವಿಶ್ವಸಂಸ್ಥೆಯ 21ನೇ ಶೃಂಗಸಭೆ ಇಂದಿನ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಆರಂಭವಾಗಿದ್ದು, 12 ದಿನಗಳ ಕಾಲ ನಡೆಯುವ ಈ ಶೃಂಗದಲ್ಲಿ 150 ರಾಷ್ಟ್ರಗಳ ನಾಯಕರು ಭಾಗವಹಿಸುತ್ತಿದ್ದಾರೆ.