ಲಂಡನ್ : ಈ ಸಾಲಿನ ಮಾನ್ ಬೂಕರ್ ಪ್ರಶಸ್ತಿ ಜಮೈಕಾದ ಕಾದಂಬರಿಕಾರ ಮಾರ್ಲನ್ ಜೇಮ್ಸ್ ಪಾಲಾಗಿದೆ. ಈ ಪ್ರಶಸ್ತಿ ಪಡೆಯುತ್ತಿರುವ ಮೊದಲ ಜಮೈಕನ್ ಲೇಖಕ ಈತ. ಜೇಮ್ಸ್ ರ `ಎ ಬ್ರೀಫ್ ಹಿಸ್ಟರಿ ಆಫ್ ಸೆವೆನ್ ಕಿಲ್ಲಿಂಗ್ಸ್' ಹೆಸರಿನ ಕಾದಂಬರಿಗೆ ಪ್ರಶಸ್ತಿ ಸಂದಿದೆ. ಈ ಸಲದ ಆಯ್ಕೆ ಅವಿರೋಧವಾಗಿತ್ತು ಎಂದು ತೀರ್ಪುಗಾರರ ಸಮಿತಿ ಅಧ್ಯಕ್ಷ ಮೈಕೆಲ್ ವುಡ್ ಹೇಳಿದ್ದಾರೆ. ಪ್ರಶಸ್ತಿಯು ಸುಮಾರು ರು. 50 ಲಕ್ಷ ನಗದು ಹೊಂದಿದೆ. ಜೇಮ್ಸ್ ನ ಈ ಕಾದಂಬರಿ ಖ್ಯಾತ ಗಾಯಕ ಬಾಬ್ ಮಾರ್ಲೆಯ ಹತ್ಯೆ ಯತ್ನದ ಸುತ್ತ ಹಬ್ಬಿಕೊಂಡಿದೆ. ಇದು ಉಜ್ವಲ, ಹಿಂಸಾತ್ಮಕ, ಲವಲವಿಕೆಯ, ಶೀಲಾಶ್ಲೀಲದ ಗಡಿ ದಾಟಿದ ಬರಹವಾಗಿದೆ. ತನ್ನ ಭಾಷೆಯ ಬಳಕೆಯಿಂ ದಾಗಿ ಇದನ್ನು ಓದುವುದೇ ಒಂದು ಸಂತೋಷದ ಅನುಭವ ಎಂದು ತೀರ್ಪು ಗಾರರು ಹೇಳಿದ್ದಾರೆ. ತೀರ್ಪುಗಾರರು ಈತನ ಕಾದಂಬರಿಯನ್ನು ಕ್ವಿಂಟೆನ್ ಟರಂಟಿನೋನ ಸಿನೆಮಾಗಳಿಗೂ ಹಾಗೂ ವಿಲಿಯಂ ಫಾಕ್ನರ್ ನ ಪ್ರಜ್ಞಾಪ್ರವಾಹ ತಂತ್ರದ ಕಾದಂಬರಿಗಳಿಗೂ ಹೋಲಿಸಿದ್ದಾರೆ. ಮಾರ್ಲನ್ ಜೇಮ್ಸ್ (44)ನ ಮೊದಲ ಕಾದಂಬರಿ 70 ಪ್ರಕಾಶಕರಿಂದ ತಿರಸ್ಕೃತವಾಗಿತ್ತು. ಇದರಿಂದ ನೊಂದು 10 ವರುಷ ಬರೆಯುವುದನ್ನೇ ಬಿಟ್ಟಿದ್ದ.ಪ್ರಶಸ್ತಿ ಬಂದಿರುವುದು `ಅಸಂಗತ' ಎಂದು ಜೇಮ್ಸ್ ಪ್ರತಿಕ್ರಿಯೆ ನೀಡಿದ್ದಾನೆ. ಈ ಪ್ರಶಸ್ತಿಯಿಂದ ಜಮೈಕಾ ಮತ್ತು ಕೆರಿಬಿಯನ್ ಪ್ರದೇಶದ ಲೇಖಕರ ಕಡೆ ಜಗತ್ತು ಕಣ್ಣು ಹಾಯಿಸುವಂತಾಗಲಿ ಎಂದು ಹಾರೈಸಿದ್ದಾನೆ.