ವಾಷಿಂಗ್ ಟನ್: ಅಮೆರಿಕಾದ ಬಹುರಾಷ್ಟ್ರೀಯ ಚಿಲ್ಲರೆ ಮಾರಾಟ ನಿಗಮ ವಾಲ್ ಮಾರ್ಟ್ ಭಾರತದಲ್ಲಿ ಹಲವು ಮಿಲಿಯನ್ ಡಾಲರ್ ನಷ್ಟು ಲಂಚ ನೀಡಿದೆ ಎಂಬ ಆರೋಪ ಕೇಳಿಬಂದಿದೆ.
ವಾಲ್ ಸ್ಟ್ರೀಟ್ ಎಂಬ ಜರ್ನಲ್ ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ವಾಲ್ ಮಾರ್ಟ್ ಕಸ್ಟಮ್ಸ್ ಮೂಲಕ ಸರಕುಗಳನ್ನು ಸ್ಥಳಾಂತರಿಸಲು ಅಥವಾ ರಿಯಲ್ ಎಸ್ಟೇಟ್ ಪರವಾನಗಿಗಳನ್ನು ಪಡೆಯಲು ಸ್ಥಳೀಯ ಕಿರಿಯ ಅಧಿಕಾರಿಗಳಿಗೆ ಸಣ್ಣ ಪ್ರಮಾಣದಲ್ಲಿ ಲಂಚ ನೀಡಿದೆ. ಲಂಚ ನೀಡಿರುವ ಹಣ 200 ಯುಎಸ್ ಡಾಲರ್ ಗಿಂತಲೂ ಕಡಿಮೆ ಇದೆ, ಇನ್ನೂ ಕೆಲವು ಅಧಿಕಾರಿಗಳಿಗೆ 5 ಯುಎಸ್ ಡಾಲರ್ ನಷ್ಟು ಲಂಚ ನೀಡಲಾಗಿದ್ದು ವಾಲ್ ಮಾರ್ಟ್ ಭಾರತದಾದ್ಯಂತ ನೀಡಿರುವ ಲಂಚದ ಒಟ್ಟು ಮೊತ್ತ ಮಿಲಿಯನ್ ಡಾಲರ್ ನಷ್ಟಾಗಲಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಆರೋಪಿಸಿದೆ.
ಭಾರತಿ ಎಂಟರ್ ಪ್ರೈಸಸ್ ಸಹಭಾಗಿತ್ವದಲ್ಲಿ ಭಾರತದಲ್ಲಿ ಚಿಲ್ಲರೆ ಅಂಗಡಿಗಳನ್ನು ಪ್ರಾರಂಭಿಸಲು ವಾಲ್ ಮಾರ್ಟ್ ಯೋಜನೆ ರೂಪಿಸಿತ್ತು, ಆದರೆ 2013 ರಲ್ಲಿ ಈ ಯೋಜನೆಯನ್ನು ಕೈಬಿಟ್ಟು ಯಾವುದೇ ಸಹಭಾಗಿತ್ವ ಇಲ್ಲದೇ ಸ್ವಂತವಾಗಿ ವಹಿವಾಟು ನಡೆಸಲು ವಾಲ್ ಮಾರ್ಟ್ ತೀರ್ಮಾನಿಸಿತ್ತು. ಮಲ್ಟಿ ಬ್ರಾಂಡ್ ಚಿಲ್ಲರೆ ವಲಯಕ್ಕಾಗಿ ಈ ಹಿಂದಿನ ಯುಪಿಎ ಸರ್ಕಾರವನ್ನು ಒತ್ತಾಯಿಸುತ್ತಿದ್ದ ವಾಲ್ ಮಾರ್ಟ್, ಇದಕ್ಕಾಗಿ ಅಮೇರಿಕ ಸರ್ಕಾರದಲ್ಲೂ ಲಾಭಿ ನಡೆಸಿತ್ತು ಎಂದು ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ.
ಅಮೇರಿಕಾದ ವಿದೇಶಿ ಲಂಚ ವಿರೋಧಿ ಕಾಯ್ದೆಯ ಪ್ರಕಾರ(ಎಫ್ ಸಿಪಿಎ) ವಾಲ್ ಮಾರ್ಟ್ ಲಂಚ ನೀಡಿರುವುದು ಸಾಬೀತಾದರೂ ಸಹ ದಂಡ ವಿಧಿಸಲು ಸಾಧ್ಯವೀಲ್ಲ. ಏಕೆಂದರೆ ವಾಲ್ ಮಾರ್ಟ್ ಲಂಚ ನೀಡಿರುವುದರಿಂದ ಯಾವುದೇ ಲಾಭ ಮಾಡಿಕೊಂಡಿಲ್ಲ. ಎಫ್ ಸಿಪಿಎ ಪ್ರಕಾರ ಲಂಚ ನೀಡಿರುವುದರಿಂದ ಬಂದಿರುವ ಲಾಭದಲ್ಲಿ ದಂಡ ವಿಧಿಸಬೇಕಾಗುತ್ತೆ ಎಂದು ಎಫ್ ಸಿಪಿಎ ತಜ್ಞರು ಹೇಳಿರುವುದನ್ನು ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ವಾಲ್ ಸ್ಟ್ರೀಟ್ ವರದಿ ಬಗ್ಗೆ ಈ ವರೆಗೂ ವಾಲ್ ಮಾರ್ಟ್ ನಿಂದ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.