ಲಂಡನ್: ಇಂಗ್ಲೆಂಡ್ ನಲ್ಲಿರುವ ತರೀಕ್ ಮೊಹಮ್ಮದ್ ಎಂಬ ಮುಸ್ಲಿಂ ಕಾರ್ಯಕರ್ತರೊಬ್ಬರು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕೊಲೆ ಕೇಸು ದಾಖಲಿಸಿದ್ದಾರೆ. 2002ರಲ್ಲಿ ನಡೆದ ಗುಜರಾತ್ ಗಲಭೆಯಲ್ಲಿ ಬ್ರಿಟನ್ ನ ಮೂವರು ನಾಗರಿಕರು ಸಾವನ್ನಪ್ಪಿದ್ದು, ಇದಕ್ಕೆ ಮೋದಿಯವರು ಕಾರಣ ಎಂದು ಆರೋಪಿಸಿ ಕೇಸು ದಾಖಲಿಸಿದ್ದು, ಅವರನ್ನು ಬಂಧಿಸಬೇಕೆಂದು ತರೀಕ್ ಮೊಹಮ್ಮದ್ ಒತ್ತಾಯಿಸಿದ್ದಾರೆ.
ಮೊಹಮ್ಮದ್ ಅವರು ದಕ್ಷಿಣ ಲಂಡನ್ ನಲ್ಲಿರುವ ಡೆಪ್ಟುಫೋರ್ಡ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದು, ಗುಜರಾತ್ ನ ಕಟುಕರಾಗಿರುವ ನರೇಂದ್ರ ಮೋದಿಯವರು ನವೆಂಬರ್ ನಲ್ಲಿ ಇಂಗ್ಲೆಂಡ್ ಗೆ ಭೇಟಿ ನೀಡುವ ಸಂದರ್ಭದಲ್ಲಿ ಅವರನ್ನು ಬಂಧಿಸಬೇಕೆಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಮೂವರು ಬ್ರಿಟನ್ ಪ್ರಜೆಗಳು 2002ರಲ್ಲಿ ರಾಜಸ್ತಾನದ ಜೈಪುರದಿಂದ ಗುಜರಾತ್ ಗೆ ಆಗಮಿಸುತ್ತಿದ್ದ ವೇಳೆ ಗಲಭೆಯಲ್ಲಿ ಸಾವಿಗೀಡಾಗಿದ್ದು, ಇದಕ್ಕೆ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರೇ ಕಾರಣ ಎಂದು ತರೀಕ್ ದೂರಿನಲ್ಲಿ ತಿಳಿಸಿದ್ದಾರೆ.