ವಾಷಿಂಗ್ಟನ್: ಮದುವೆಯಾಗುವ ತನಕ ತಮ್ಮ ಮನೆ ಹೆಣ್ಣುಮಕ್ಕಳು ಕನ್ಯತ್ವ (ವರ್ಜಿನಿಟಿ) ಕಾಯ್ದುಕೊಳ್ಳಲಿ ಎಂಬ ನಿರೀಕ್ಷೆ ಎಲ್ಲ ತಂದೆ ತಾಯಿಯರಲ್ಲೂ ಇದ್ದೇ ಇರುತ್ತದೆ. ವರ ಕೂಡ ತಾನು ಮದುವೆಯಾಗುವ ಹುಡುಗಿ ವರ್ಜಿನ್ ಇರಲಿ ಎಂದೇ ಬಯಸುತ್ತಾನೆ.
ಆದರೆ ಅದನ್ನು ಬಾಯಿಬಿಟ್ಟು ಕೇಳುವ ಮಟ್ಟಕ್ಕೆ ಸುಮಾರಾಗಿ ಪೋಷಕರಾಗಲೀ ಮದುವೆ ಗಂಡಾಗಲೀ ಹೋಗುವುದಿಲ್ಲ. ಇತ್ತೀಚೆಗೆಂತೂ ಈ ಪರಿ ಕಲ್ಪನೆಗೆ ಹೆಚ್ಚಿನ ಮಹತ್ವವೇ ಇಲ್ಲ. ಅದನ್ನು ವೈಜ್ಞಾನಿಕವಾಗಿಯಷ್ಟೇ ನೋಡುತ್ತಾರೆ. ಆದರೆ ವಾಷಿಂಗ್ಟನ್ ನಲ್ಲಿ ಸಂಭವಿಸಿದ ಕನ್ಯತ್ವ ಸಂಬಂಧಿ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಕೊಲಂಬಿಯಾದ ಮೈಕೆಲ್ ಫ್ರೀಮನ್ ಎಂಬಾತನಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗ. ಈತ ಈ ಮೂವರೂ ಮಕ್ಕಳಿಂದ ಒಂದು ಲಿಖಿತ ಒಪ್ಪಂದ ಮಾಡಿಕೊಂಡಿದ್ದ.
ಮದುವೆಯ ತನಕವೂ ಇವರು ತಮ್ಮ ಕನ್ಯತ್ವ ಪೋಷಿಸಿಕೊಳ್ಳಬೇಕು ಎಂಬುದೇ ಆ ಷರತ್ತು. ಈ ಒಪ್ಪಂದವಾಗಿ ವರ್ಷಗಳೇ ಕಳೆದಿವೆ. ದ್ವಿತೀಯ ಪುತ್ರಿ ಬೋಮನ್‍ಗೆ ಈಗ ಟಿಮ್ ಎಂಬಾತನೊಡನೆ ವಿವಾಹ. ಮದುವೆಗೆ ಮುನ್ನ ಆಕೆ ಮಾಡಿದ್ದೇನು ಗೊತ್ತೇ? ತಾನು ಕನ್ಯತ್ವ ಕಾಯ್ದಿಟ್ಟುಕೊಂಡಿದ್ದೇನೆ ಎಂಬ ಪ್ರಮಾಣ ಪತ್ರಕ್ಕೆ ಫ್ರೇಮ್ ಹಾಕಿಸಿ ಅದನ್ನು ತಂದೆಗೆ ಉಡುಗೊರೆಯಾಗಿ ನೀಡಿದ್ದಾಳೆ. ಆ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್‍ಲೋಡ್ ಕೂಡ ಮಾಡಿದ್ದಾಳೆ. ತಂದೆಯೊಂದಿಗೆ ನಿಂತು ಸರ್ಟಿಫಿಕೇಟ್ ಆಫ್ ಪ್ಯೂರಿಟಿ ತೋರಿಸುತ್ತಾ ಪೋಸ್ ನೀಡಿರುವ ಫೋಟೋ ಇದೀಗ ವೈರಲ್ ಆಗಿದೆ.
ಆದರೆ ವೆಬ್‍ಸೈಟ್ ಒಂದಕ್ಕೆ ಸಂದರ್ಶನ ನೀಡಿರುವ ಫ್ರೀಮನ್ ಈ ಘಟನೆಯ ಬಗ್ಗೆ ಖುಲ್ಲಂಖುಲ್ಲ ಮಾತನಾಡಿದ್ದಾನೆ. ತನ್ನ ಹಿರಿಯ ಪುತ್ರಿ ಬ್ರಿಟಾನಿ ಕೂಡ ಮದುವೆಗೆ ಮುನ್ನ ತನ್ನ ಶುದ್ಧತೆ ಪ್ರಮಾಣ ಪತ್ರ ನೀಡಿದ್ದಳು ಎನ್ನುವ ಫ್ರೀಮನ್, ತನ್ನ ದ್ವಿತೀಯ ಪುತ್ರಿ ಕೂಡ ಮಾತಿನಂತೆ ನಡೆದುಕೊಂಡಿದ್ದಾಳೆಂದು ಸಂತಸ ವ್ಯಕ್ತಪಡಿಸಿದ್ದಾನೆ. ಆಕೆ ಸ್ತ್ರೀರೋಗ ತಜ್ಞರಿಂದ ಪಡೆದ ಪ್ರಮಾಣಪತ್ರವನ್ನು ಅ.10ರಂದು ತನ್ನ ಮದುವೆಗೆ ಕೆಲವೇ ಕ್ಷಣಗಳ ಮುನ್ನ ತಂದೆಗೆ ಉಡುಗೊರೆಯಾಗಿ ನೀಡಿದಳಂತೆ. ಆದರೆ ಮಗ ಮಾತ್ರ ಒಪ್ಪಂದ ಮುರಿದು ಮದುವೆಗೆ ಮುನ್ನವೇ ಲೈಂಗಿಕ ಅನುಭವ ಪಡೆದಿದ್ದನಂತೆ.
ಫ್ರೀಮನ್‍ನ ಈ ಕಂಡಿಷನ್ ಹಾಗೂ ಬೋಮನ್‍ಳ ಪ್ರತಿಕ್ರಿಯೆ ಎರಡಕ್ಕೂ ಸಾಮಾಜಿಕ ತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಉಡುಗೊರೆಯೊಂದಿಗೆ ಸೆಕ್ಸ್ ಕುರಿತು ಆಕೆ ಬರೆದಿರುವ ಮಾತುಗಳು ಕೂಡ ಹಲವರ ಹುಬ್ಬೇರಿಸಿದೆ. ಬೋಮನ್‍ಳ ಇನ್ ಸ್ಟಾಗ್ರಾಂ ಅಕೌಂಟಿನಲ್ಲಿ ಇದೊಂದು ಅಸಹ್ಯ ಎಂದೆಲ್ಲ ಕಮೆಂಟುಗಳು ಬಂದಿವೆ. ಇದೇ ವೇಳೆ ಕೆಲವರು ಆಕೆಗೆ ಶಭಾಶ್ ಗಿರಿಯನ್ನೂ ನೀಡಿ ಬೆಂಬಲಿಸಿದ್ದಾರೆ.