ವಿದೇಶ

ಚೀನಾ ದ್ವೀಪದ ಸಮೀಪ ಅಮೆರಿಕ ಯುದ್ಧ ನೌಕೆ; ರಾಯಭಾರ ಕಚೇರಿಗೆ ಸಮನ್ಸ್ ಜಾರಿ

Srinivasamurthy VN

ಬೀಜಿಂಗ್: ದಕ್ಷಿಣ ಚೀನಾ ಸಾಗರದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಚೀನಾ ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವ ನಡುವೆಯೇ ವಿಶ್ವದ ದೊಡ್ಡಣ್ಣ ಅಮೆರಿಕ ಇದಕ್ಕೆ ಅಡ್ಡಗಾಲಾಗಿ ನಿಂತಿದ್ದು, ವಿವಾದಿತ ಪ್ರದೇಶದಲ್ಲಿ ತನ್ನ ಯುದ್ಧನೌಕೆಗಳ ಮೂಲಕ ಸರ್ವೇಕ್ಷಣೆ ನಡೆಸಿರುವುದು ಕೆಂಪು ಆರ್ಮಿಯ ಕೆಂಗಣ್ಣಿಗೆ ಗುರಿಯಾಗಿದೆ.

ಚೀನಾ ತನ್ನದೆಂದು ಹೇಳಿಕೊಂಡಿರುವ ಕೃತಕ ದ್ವೀಪವೊಂದರಿಂದ ಸುಮಾರು 12 ನಾಟಿಕಲ್ ಮೈಲುಗಳ ದೂರದಲ್ಲಿ ಅಮೆರಿಕದ ಯುದ್ಧನೌಕೆಗಳು ಸರ್ವೇಕ್ಷಣೆ ನಡೆಸಿರುವುದನ್ನು ವಿರೋಧಿಸಿದೆ. ಅಲ್ಲದೆ ಚೀನಾ ಸರ್ಕಾರ ಬೀಜಿಂಗ್ ನಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ಸಮನ್ಸ್ ಜಾರಿ ಮಾಡಿದ್ದು, ಈ ವಿಚಾರ ಇದೀಗ ಅಮೆರಿಕ ಮತ್ತು ಚೀನಾ ರಾಷ್ಟ್ರಗಳ ನಡುವೆ ಮತ್ತೊಂದು ಹಂತದ  ಹಗ್ಗ-ಜಗ್ಗಾಟಕ್ಕೆ ವೇದಿಕೆ ಕಲ್ಪಿಸಿದೆ.

ದಕ್ಷಿಣ ಚೀನಾ ಸಾಗರದಲ್ಲಿ ದ್ವೀಪಗಳ ಸರಪಳಿಯಿದ್ದು, ಈ ವಲಯದ ಸಾಗರ ಹಾಗೂ ವಾಯುಭಾಗದಲ್ಲಿ ಹಿಡಿತ ಸಾಧಿಸಲು ಮೊದಲಿನಿಂದಲೂ ಚೀನಾ ಪ್ರಯತ್ನಿಸುತ್ತಿದೆ. ಈಗಾಗಲೇ ಈ  ಪ್ರದೇಶಗಳಲ್ಲಿ ತನ್ನ ಯುದ್ಧನೌಕೆಗಳನ್ನು ನಿಯೋಜಿಸಿರುವ ಚೀನಾ ಸರ್ಕಾರ, ಕೆಲ ದ್ವೀಪಗಳಲ್ಲಿ ವಾಯು ನೆಲೆಗಳನ್ನೂ ಸ್ಥಾಪಿಸುತ್ತಿದೆ ಎಂಬ ಮಾಹಿತಿ ದೊರೆತಿದೆ. ಇದಲ್ಲದೆ ಬಹುಪಯೋಗಿ  ಕೃತಕ ದ್ವೀಪಗಳ ನಿರ್ಮಾಣಕ್ಕೂ ಚೀನಾ ಮುಂದಾಗಿದ್ದು, ಈಗಾಗಲೇ ಕೆಲ ದ್ವೀಪಗಳನ್ನು ಕೂಡ ನಿರ್ಮಾಣ ಮಾಡಿದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಅಮೆರಿಕದ ಯುಎಸ್‌ಎಸ್ ಲಾಸನ್ ಯುದ್ಧನೌಕೆ, ಚೀನಾ ತನ್ನದೆಂದು ಹೇಳಿಕೊಳ್ಳುತ್ತಿರುವ ಸುಬಿ ರೀಫ್ ದ್ವೀಪದ ಸನಿಹದಲ್ಲಿ ಹಾದು ಹೋಗಿರುವುದನ್ನು ಪೆಂಟಗಾನ್ ಖಚಿತಪಡಿಸಿದ್ದು, ಇದು ಪ್ರಸ್ತುತ ಚೀನಾ ಕೆಂಗಣ್ಣಿಗೆ  ಗುರಿಯಾಗಿದೆ.

ಕಳೆದ ತಿಂಗಳು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಮೆರಿಕ ಪ್ರವಾಸ ಕೈಗೊಂಡಿದ್ದಾಗ ಈ ದಕ್ಷಿಣ ಚೀನಾ ಸಾಗರ ವಿಚಾರವಾಗಿ ಸಾಕಷ್ಟು ಮಾತುಕತೆ ನಡೆಸಿದ್ದರಾದರೂ, ಉಭಯ ರಾಷ್ಟ್ರಗಳು  ತಮ್ಮ-ತಮ್ಮ ಈ ಹಿಂದಿನ ನಿಲುವಿಗೇ ಅಂಟಿಕೊಂಡಿರುವುದು ಗೊಂದಲಕ್ಕೆ ದಾರಿ ಮಾಡಿದೆ. ಅಮೆರಿಕದ ಈ ನಡೆ, ದಕ್ಷಿಣ ಚೀನಾ ಸಾಗರದಲ್ಲಿ ಮುಕ್ತ ಯಾನಕ್ಕೆ ಅವಕಾಶವಿರಬೇಕು ಎಂಬ  ಭಾರತದ ನಿಲುವಿಗೆ ಬೆಂಬಲವಾಗಿರುವುದು ಇನ್ನಷ್ಟು ಬಲ ನೀಡಿದಂತಾಗಿದೆ.

ಈ ಹಿಂದೆ ಇದೇ ದಕ್ಷಿಣ ಹಿಂದೂ ಮಹಾ ಸಾಗರದಲ್ಲಿ ಭಾರತ, ಅಮೆರಿಕ ಮತ್ತು ಜಪಾನ್ ದೇಶಗಳು ಜಂಟಿ ಸಮರಾಭ್ಯಾಸ ಕೈಗೊಂಡಿದ್ದಾಗಲೂ ಚೀನಾ ಇದೇ ರೀತಿಯ ಕ್ಯಾತೆ ತೆಗೆದಿತ್ತು. ಅಲ್ಲದೆ  ಭಾರತ ಈ ಜಂಟಿ ಸಮರಾಭ್ಯಾಸದಿಂದ ಹೊರಬರುವಂತೆ ಪರೋಕ್ಷವಾಗಿ ಒತ್ತಡ ಹೇರಿತ್ತು.

SCROLL FOR NEXT