ವಿದೇಶ

ರೊಮಾನಿಯಾದ ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ: ಕನಿಷ್ಠ 27 ಮಂದಿ ಸಾವು

Sumana Upadhyaya

ಬುಚಾರೆಸ್ಟ್: ರೊಮಾನಿಯಾದ ರಾಜಧಾನಿ ಬುಚಾರೆಸ್ಟ್ ನ ನೈಟ್ ಕ್ಲಬ್ ವೊಂದರಲ್ಲಿ ಶುಕ್ರವಾರ ರಾತ್ರಿ ಸಂಗೀತಸಂಜೆ ಕಾರ್ಯಕ್ರಮದ ವೇಳೆ ಬೆಂಕಿ ಹತ್ತಿ ಉರಿದು ಸ್ಪೋಟವುಂಟಾಗಿ ಕನಿಷ್ಟ 27 ಮಂದಿ ಸಾವನ್ನಪ್ಪಿ 155 ಮಂದಿ ಗಾಯಗೊಂಡಿದ್ದಾರೆ.

ಈ ದಶಕದಲ್ಲೇ ಸಂಭವಿಸಿದ ಅತ್ಯಂತಸ ಕೆಟ್ಟ ಅವಘಡ ಎಂದು ರೊಮಾನಿಯಾ ಸರ್ಕಾರದ ಅಧಿಕಾರಿಗಳು ಬಣ್ಣಿಸಿದ್ದಾರೆ. ಕ್ಲಬ್ ಒಳಗಡೆ ಪಟಾಕಿಗಳಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಸುಡುಮದ್ದಿನಿಂದಾಗಿ ಸ್ಪೋಟ ಸಂಭವಿಸಿದೆ ಎಂದು ಅವರು ಹೇಳುತ್ತಾರೆ.

ನೈಟ್ ಕ್ಲಬ್ ನಲ್ಲಿ ಇದ್ದಕ್ಕಿದ್ದಂತೆ ಜ್ವಾಲೆ ಕಾಣಿಸಿಕೊಂಡಿತು. ಕೋಣೆಯ ಕಂಬ ಮತ್ತು ಛಾವಣಿಯಲ್ಲಿ ಜ್ವಾಲೆ ಕಾಣಿಸಿಕೊಂಡು ನಂತರ ಸ್ಪೋಟ ಉಂಟಾಯಿತು, ಬಳಿಕ ತೀವ್ರ ಹೊಗೆ ಕೋಣೆಯ ಸುತ್ತ ಆವರಿಸಿಕೊಂಡಿತು. ಈ ವೇಳೆ ಅಲ್ಲಿದ್ದ ಜನರು ಹೆಚ್ಚಾಗಿ ಯುವಕರು ಗಾಬರಿಯಿಂದ ದಿಕ್ಕುಪಾಲಾಗಿ ಓಡಿದರು. ಈ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಅನೇಕರು ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೂಡಲೇ ಆಂಬ್ಯುಲೆನ್ಸ್ ವಾಹನಗಳು, ಅಗ್ನಿಶಾಮಕ ಸಿಬ್ಬಂದಿ ಮತ್ತು ತುರ್ತುಸೇವೆ ಘಟಕದವರು ಸ್ಥಳಕ್ಕೆ ಧಾವಿಸಿದರು. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೊಮಾನಿಯಾ ಸರ್ಕಾರದ ಉಪ ಆಂತರಿಕ ಸಚಿವ ರಾಡ್ ಅರಾಫತ್ ತಿಳಿಸಿದ್ದಾರೆ.

ಘಟನೆ ಕುರಿತು ತನಿಖೆ ಕೈಗೊಳ್ಳಲು ಸರ್ಕಾರ ಆದೇಶ ನೀಡಿದೆ. ಗಾಯಾಳುಗಳಲ್ಲಿ ಅಗತ್ಯವಿರುವವರಿಗೆ ರಕ್ತದಾನ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸರ್ಕಾರದ ಸಚಿವರು ತಿಳಿಸಿದ್ದಾರೆ.

SCROLL FOR NEXT