ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವಕ್ಕೆ ಭಾರತ ನಡೆಸುತ್ತಿರುವ ¸ಸತತ ಪ್ರಯತ್ನಕ್ಕೆ ಹೊಸ ಬಲ ಬಂದಿದ್ದು, ಚೀನಾ ಸೇರಿದಂತೆ ವಿಶ್ವಸಂಸ್ಥೆಯ ಸುಮಾರು 200 ಸದಸ್ಯ ರಾಷ್ಟ್ರಗಳು ಭದ್ರತಾ ಮಂಡಳಿಯ ಸುಧಾರಣೆಗೆ ಸಂಬಂಧಿಸಿ ತಮ್ಮ ಅಭಿಪ್ರಾಯ ದಾಖಲಿಸಲು ಮುಂದಾಗಿವೆ.
15 ಸದಸ್ಯ ಬಲದ ಭದ್ರತಾ ಮಂಡಳಿಯಲ್ಲಿ ಸದ್ಯಕ್ಕೆ ಅಮೆರಿಕ, ಚೀನಾ, ರಷ್ಯಾ ಸೇರಿ 5 ರಾಷ್ಟ್ರಗಳು ಕಾಯಂ ಸದಸ್ಯತ್ವ ಹೊಂದಿವೆ. ಭಾರತವನ್ನೂ ಕಾಯಂ ಸದಸ್ಯ ರಾಷ್ಟ್ರವನ್ನಾಗಿ ಪರಿಗಣಿಸಲು ಪೂರಕವಾಗಿ ಭದ್ರತಾ ಮಂಡಳಿಯ ಪುನರ್ ರಚನೆಗೆ ಸಂಬಂಧಪಟ್ಟಂತೆ ತಮ್ಮ ಅಭಿಪ್ರಾಯ ಮಂಡಿಸಲು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಸೋಮವಾರ ಇದೇ ಮೊದಲ ಬಾರಿಗೆ ಸಮ್ಮತಿ ಸೂಚಿಸಿವೆ.
ಪುನರ್ ರಚನೆ ನಿಲುವಳಿ ಸಂಬಂಧ ತಮ್ಮ ಸಲಹೆಗಳನ್ನು ನೀಡಿರುವ ಸದಸ್ಯ ರಾಷ್ಟ್ರಗಳ ಈ ನಡೆ ಭಾರತದ ಪಾಲಿಗೆ ಮಹತ್ವದ ಬೆಳವಣಿಗೆಯಾಗಿದೆ. ಆದರೆ, ಈ ನಡುವೆಯೂ ಭಾರತಕ್ಕೆ ಖಾಯಂ ಸದಸ್ಯತ್ವ ನೀಡಲು ಹಾಗೂ ಅದಕ್ಕೆ ಪೂರಕವಾಗಿ ಭದ್ರತಾ ಮಂಡಳಿ ಪುನರ್ ರಚನೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಸಮ್ಮತಿ ಸೂಚಿಸಿಲ್ಲ. ಮಂಡಳಿ ವಿಸ್ತರಣೆ ವಿರೋಧಿಸಿರುವ ಚೀನಾ, ಅಗತ್ಯಬಿದ್ದರೆ ಈ ಸಂಬಂಧ ಸದಸ್ಯ ರಾಷ್ಟಗಳ ಮತಗಣನೆಯಾಗಲಿ ಎಂದಿದೆ.