ವಾಷಿಂಗ್ಟನ್: ಅಮೆರಿಕನ್ನರ ಕನಸು ನನಸಾಗಿದೆ. ಅಂತೂ ಇಂತೂ ಬಹುವರ್ಷಗಳ ನಂತರ ಪೋಪ್‍ವೊಬ್ಬರು ಅಮೆರಿಕಕ್ಕೆ ಭೇಟಿ ನೀಡಿದ್ದಾರೆ. ಮಂಗಳವಾರ ರಾತ್ರಿ ಬಂದಿಳಿದ ಪೋಪ್ ಫ್ರಾನ್ಸಿಸ್ ಅವರನ್ನು ಸ್ವತಃ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರೇ ಸ್ವಾಗತಿಸಿದ್ದಾರೆ.
ಇದಕ್ಕಾಗಿ ಎಲ್ಲ ಶಿಷ್ಟಾಚಾರ ಮುರಿದ ಅವರು, ಪತ್ನಿ ಮಿಶೆಲ್ ಒಬಾಮ ಮತ್ತು ಮಕ್ಕಳೊಂದಿಗೆ ಏರ್‍ಪೋಟ್ರ್ ಗೆ ಬಂದು ಧರ್ಮಗುರು ಪೋಪ್ ಅವರಿಗೆ ಹೃದಯಸ್ಪರ್ಶಿ ಸ್ವಾಗತ ನೀಡಿದ್ದಾರೆ. ಬುಧವಾರ ವೈಟ್‍ಹೌಸ್‍ನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪೋಪ್, ಹವಾಮಾನ ಬದಲಾವಣೆ ಕುರಿತಂತೆ ಅಮೆರಿಕ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದರು. ಇದರ ಜತೆಗೆ ಜಾಗತಿಕ ಶಾಂತಿ ಮತ್ತು ಧಾರ್ಮಿಕ ಅಸಹಿಷ್ಣುತೆ ಕುರಿತಂತೆಯೂ ಮಾತನಾಡಿದರು. ಸುಮಾರು 20 ಸಾವಿರ ಮಂದಿ ಸೇರಿದ್ದ ಈ ಕಾರ್ಯಕ್ರಮದಲ್ಲಿ ಅವರಿಂದ ಬಂದ ಮೊದಲ ಮಾತು ``ನಾನು ಕೆಲ ದಿನ ಈ ದೇಶದಲ್ಲಿರಲಿದ್ದೇನೆ, ಅಮೆರಿಕಕ್ಕೆ ಒಳ್ಳೇದಾಗಲಿ'' ಎಂಬುದು.
ಸರ್ವಧರ್ಮ ಸಮ್ಮೇಳನಕ್ಕೆ ಬೆಂಗಳೂರು ಮೂಲದ ಮಹಿಳೆ
ಬರುವ ವಾರ 9/11 ಸ್ಮರಣಾರ್ಥ ಪೋಪ್ ನೇತೃತ್ವದಲ್ಲಿ ಸರ್ವಧರ್ಮ ಸಮ್ಮೇಳನವನ್ನು ಏರ್ಪಡಿಸಲಾಗಿದ್ದು, ಇದರಲ್ಲಿ ಬೆಂಗಳೂರು ಮೂಲದ ಮಹಿಳೆ ಉಮಾ ಮೈಸೂರ್ಕರ್ ಅವರು ಹಿಂದೂ ಧರ್ಮದ ಪರವಾಗಿ ಭಾಗವಹಿಸಲಿದ್ದಾರೆ. ಇವರು ಉತ್ತರ ಅಮೆರಿಕದಲ್ಲಿ ಪ್ರಸಿದ್ಧ ಪ್ರಸೂತಿ ತಜ್ಞೆಯಾಗಿದ್ದಾರೆ. ಅಲ್ಲದೆ ಉತ್ತರ ಅಮೆರಿಕದ ಹಿಂದೂ ಟೆಂಪಲ್ ಸೊಸೈಟಿಯ ಅಧ್ಯಕ್ಷರೂ ಆಗಿದ್ದಾರೆ. ಇವರ ಜತೆಗೆ ಸಿಖ್ ಧರ್ಮದ ಪ್ರತಿನಿಧಿಯಾಗಿ ಬಫಾಲೋ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಸತ್ಪಾಲ್ ಸಿಂಗ್ ಮತ್ತು ಅವರ ಪುತ್ರಿ ಗುನಿಶಾ ಕೌರ್ ಭಾಗವಹಿಸಲಿದ್ದಾರೆ. ಹಿಂದೂ, ಸಿಖ್ ಧರ್ಮಗಳೊಂದಿಗೆ ಬೌದ್ಧ, ಪ್ರೊಟೆಸ್ಟೆಂಟ್, ಗ್ರೀಕ್ ಸಂಪ್ರದಾಯವಾದಿ, ಯಹೂದಿ ಮತ್ತು ಮುಸ್ಲಿಂ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.