ನ್ಯೂಯಾರ್ಕ್: ನ್ಯೂಯಾರ್ಕ್ ನಲ್ಲಿ ಜಿ 4 ರಾಷ್ಟ್ರಗಳ ಶೃಂಗಸಭೆಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವಕ್ಕೆ ಒತ್ತು ನೀಡಿದ್ದಾರೆ.
ವಿಶ್ವಸಂಸ್ಥೆಯಲ್ಲಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವಕ್ಕೆ ಖಾಯಂ ಸದಸ್ಯತ್ವ ನೀಡಬೇಕಿದೆ. ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಪಡೆಯಲು ಭಾರತ ಅರ್ಹವಾಗಿದೆ. ಜಾಗತಿಕ ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕೆ ಭದ್ರತಾ ಮಂಡಳಿಯ ಪುನಾರಚನೆಗೆ ಆದ್ಯತೆ ನೀಡಬೇಕಿದೆ. ವಿಶ್ವಸಂಸ್ಥೆಯ 70 ನೇ ಅಧಿವೇಶನದಲ್ಲಿ ಯುಎನ್ಎಸ್ ಸಿ ಪುನಾರಚನೆಗೆ ಒತ್ತು ನೀಡಬೇಕಿದೆ ಎಂದು ಪ್ರಧಾನಿ ಹೇಳಿದ್ದಾರೆ. ಪ್ರಸ್ತುತದ ಸವಾಲುಗಳು ಹಿಂದಿಗಿಂತಲೂ ಭಿನ್ನವಾಗಿದ್ದು, ಭಯೋತ್ಪಾದನೆ ನಿಗ್ರಹ ವಿಷಯದಲ್ಲಿ ಜಿ 4 ರಾಷ್ಟ್ರಗಳು ಒಟ್ಟಾಗಬೇಕಿದೆ, ಎಂದು ಮೋದಿ ಜಿ.4 ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.
ಹವಾಮಾನ ಬದಲಾವಣೆ ಸಹ ಇಂದಿನ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದ್ದು, ಜಿ 4 ರಾಷ್ಟ್ರಗಳು(ಭಾರತ, ಜಪಾನ್, ಬ್ರೆಜಿಲ್, ಜರ್ಮನಿ) ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಭಾರತ ಆಯೋಜಿಸಿದ್ದ ಸಭೆಯಲ್ಲಿ ಜಪಾನ್ ನ ಪ್ರಧಾನಿ ಶಿಂಜೋ ಅಬೆ, ಬ್ರೆಜಿಲ್ ನ ಅಧ್ಯಕ್ಷ ದಿಲ್ಮಾ ರೌಸೆಫ್, ಜರ್ಮನಿ ಛಾನ್ಸೆಲರ್ ಏಂಜೆಲಾ ಮರ್ಕೆಲ್ ಭಾಗವಹಿಸಿದ್ದರು.