ವಿದೇಶ

ಇಸೀಸ್ ನಂತಹ ಸಂಘಟನೆಗಳು ವಿಶ್ವಕ್ಕೆ ಅಪಾಯಕಾರಿ: ಬ್ರಿಕ್ಸ್ ರಾಷ್ಟ್ರಗಳ ವಿದೇಶಾಂಗ ಸಚಿವರ ಅಭಿಮತ

Srinivas Rao BV

ನ್ಯೂಯಾರ್ಕ್: ಬ್ರಿಕ್ಸ್ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಭಯೋತ್ಪಾದನೆ ವಿಷಯ ಚರ್ಚೆಯಾಗಿದ್ದು ಐಎಸ್ಐಎಸ್(ಇಸೀಸ್) ನಂತಹ ಸಂಘಟನೆಗಳು ಅಂತರಾಷ್ಟ್ರೀಯ ಸಮುದಾಯಕ್ಕೆ ಮಾರಕ ಎಂಬ ಒಮ್ಮತದ ನಿಲುವು ವ್ಯಕ್ತವಾಗಿದೆ.
ವಿದೇಶಾಂಗ ಸಚಿವರ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕಾಸ್ ಸ್ವರೂಪ್, ಭಯೋತ್ಪಾದನೆ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿಸಿದ್ದಾರೆ. ವಿಶ್ವದಲ್ಲಿ ನಡೆಯುತ್ತಿರುವ ಘರ್ಷಣೆಗಳು ಭಯೋತ್ಪಾದನೆ ಚಟುವಟಿಕೆಗಳಿಗೆ ವೇದಿಕೆಯಾಗಿದ್ದು, ನಾಗರಿಕರು ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ವಿಕಾಸ್ ಸ್ವರೂಪ್ ಮಾಹಿತಿ ನೀಡಿದ್ದಾರೆ.
ಪ್ರಮುಖವಾಗಿ ಐಎಸ್ಐಎಸ್ ನಂತಹ ಸಂಘಟನೆಗಳು ಮಧ್ಯಪ್ರಾಚ್ಯ ರಾಷ್ಟ್ರಗಳಷ್ಟೆ ಅಲ್ಲದೇ ಇಡಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಅಪಾಯಕಾರಿ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಭಯೋತ್ಪಾದನೆಯನ್ನು ಬ್ರಿಕ್ಸ್ ರಾಷ್ಟ್ರಗಳ ವಿದೇಶಾಂಗ ಸಚಿವರು ಖಂಡಿಸಿದ್ದು, ಉಗ್ರವಾದದ ವಿರುದ್ಧ ಹೋರಾಡಲು ಒಗ್ಗೂಡಬೇಕಿದೆ ಎಂಬ ತೀರ್ಮಾನಕ್ಕೆ ಬರಲಾಗಿದೆ. ಉಗ್ರವಾದದ ವಿರುದ್ಧ ಹೋರಾಡುವ ಮಾರ್ಗವನ್ನು ಭಾರತ ಈಗಾಗಲೇ ಬ್ರಿಕ್ಸ್ ರಾಷ್ಟ್ರಗಳ ಮುಂದಿಟ್ಟಿದೆ. ವಿಶ್ವ ಸಂಸ್ಥೆ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಭಯೋತ್ಪಾದನಾ ನಿಗ್ರಹಕ್ಕೆ ಭಾರತ ಒತ್ತಾಯಿಸಿದೆ ಎಂದು ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.

SCROLL FOR NEXT