ಬಾಗ್ದಾದ್ : ಸಂಬಳ ಕಡಿತ ಮಾಡಿದ ಕಾರಣ ಉಗ್ರ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ಸ್ (ಇಸಿಸ್) ಬಿಟ್ಟು ಜಿಹಾದಿಗಳು ಹೊರ ನಡೆದಿರುವುದಾಗಿ ಸುದ್ದಿಯಾಗಿದೆ. ಹೀಗೆ ಇಸಿಸ್ ಬಿಟ್ಟು ಬಂದಿರುವ ಉಗ್ರರ ಬೇರೆ ಉಗ್ರ ಸಂಘಟನೆಗಳಿಗೆ ಸೇರುತ್ತಿದ್ದಾರೆ. ಈ ಮೊದಲು 260 ಬ್ರಿಟಿಷ್ ಪೌಂಡ್ಸ್ (ಸರಿಸುಮಾರು 25 ಸಾವಿರ ರುಪಾಯಿ) ಸಂಬಳವಿದ್ದ ಇಸಿಸ್ ಉಗ್ರರಿಗೆ ಈಗ 65 ಪೌಂಡ್ಸ್ ನೀಡಲಾಗುತ್ತಿದೆ. ಸಂಬಳದಲ್ಲಿ ಭಾರೀ ಕಡಿತ ಮಾಡಿರುವ ಕಾರಣ ಸುಮಾರು 250 ಜಿಹಾದಿಗಳು ಇಸಿಸ್ ತೊರೆದಿದ್ದಾರೆ ಎಂದು ಸುದ್ದಿಮೂಲಗಳು ವರದಿ ಮಾಡಿವೆ.
ಇರಾಕ್ ಮತ್ತು ಸಿರಿಯಾದಲ್ಲಿ ವಾಯುದಾಳಿ ನಡೆಯುತ್ತಿರುವ ಕಾರಣ ಅಲ್ಲಿ ಸಂಗ್ರಹಿಸಿಟ್ಟ ಸಂಪತ್ತನ್ನು ತೆಗೆಯಲು ಅಬೂಬಕ್ಕರ್ ಅಲ್ ಬಾಗ್ದಾದಿ ನೇತೃತ್ವದ ಇಸಿಸ್ ಗೆ ಅಸಾಧ್ಯವಾಗಿದೆ. ಇರಾಕ್ ಮತ್ತು ಸಿರಿಯಾದಲ್ಲಿ ಬ್ಯಾಂಕ್ ದರೋಡೆ ಮಾಡಿಕೊಂಡು, ಜನರನ್ನು ಅಪಹರಿಸುವ ಮೂಲಕ ಇಸಿಸ್ ದುಡ್ಡು ಸಂಗ್ರಹ ಮಾಡಿತ್ತು. ಆದರೆ ಈಗ ಅಲ್ಲಿ ನಿರಂತರ ವಾಯುದಾಳಿ ನಡೆಯುತ್ತಿರುವುದರಿಂದ ಅಲ್ಲಿನ ಶೇಖರಿಸಿಟ್ಟ ದುಡ್ಡನ್ನು ತೆಗೆಯಲಾಗದೆ ಇಸಿಸ್ ಸಂಕಷ್ಟದಲ್ಲಿದೆ.