ಬೀಜಿಂಗ್ : ತದ್ರೂಪಿ ಅವಳಿ ಸಹೋದರರು ತದ್ರೂಪದ ಅವಳಿ ಸಹೋದರಿಯರನ್ನು ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ಮದುವೆಯಾಗಿದ್ದು, ಈ ದಂಪತಿ ನಡುವೆ ಸಮಸ್ಯೆ ಆರಂಭವಾಗಿದೆ .
ಝಾವೋ ಕ್ಸಿನ್ ಮತ್ತು ಅವರ ತಮ್ಮ ಝಾವೋ ಕ್ಸನ್ ಶಾಂಕ್ಸಿ ಪ್ರಾಂತ್ಯದ ಯುಂಚೆಂಗ್ ನಗರದ ಗ್ರಾಮಕ್ಕೆ ಸೇರಿದವರು. ಇವರಿಬ್ಬರು ಎಷ್ಟೊಂದು ಪರಸ್ಪರ ಹೋಲುತ್ತಾರೆಂದರೆ ಸ್ನೇಹಿತರಿಗೆ ಮತ್ತು ಬಂಧುಗಳಿಗೆ ಗುರುತು ಹಿಡಿಯುವುದೇ ಕಷ್ಟವಾಗಿತ್ತು. ಕ್ಸಿನ್ನೋ, ಕ್ಸನ್ನೋ ಎನ್ನುವುದನ್ನು ತಿಳಿಯದೇ ಅನೇಕ ಬಾರಿ ಸ್ನೇಹಿತರು ಬೇಸ್ತುಬಿದ್ದಿದ್ದರು.
ಅವಳಿ ಸೋದರಿಯರನ್ನೇ ಮದುವೆಯಾಗಿ ಮತ್ತಷ್ಟು ಪಜೀತಿಗೆ ಸಿಕ್ಕಿಬಿದ್ದಿದ್ದಾರೆ. ಅವಳಿ ಸೋದರಿಯರು ಕೂಡ ಒಂದೇ ರೀತಿ ಇದ್ದು ಗುರುತು ಹಿಡಿಯುವುದು ಕಷ್ಟವಾಗಿದೆ. ನನ್ನ ಪತ್ನಿಯಾ ಅಥವಾ ಸೋದರನ ಪತ್ನಿಯ ಎಂದು ಅನೇಕ ಬಾರಿ ಗೊಂದಲಕ್ಕೆ ಒಳಗಾಗಿದ್ದೂ ಇದೆ. ಯಾವುದೋ ಒಂದು ಸಮಾರಂಭದಲ್ಲಿ ಕ್ಸಿನ್ ತನ್ನ ಸೋದರನ ಪತ್ನಿಯ ಕೈಯನ್ನು ಹಿಡಿದಿದ್ದ. ಕ್ಸನ್ ಕೂಡ ಅದೇ ರೀತಿ ಸೋದರನ ಪತ್ನಿಯ ಕೈ ಹಿಡಿದಿದ್ದ.
ಇವೆಲ್ಲಾ ಪಜೀತಿಗಳಿಂದ ಹೊರಬರಲು ಈ ಜೋಡಿಗಳು ಸಣ್ಣ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ವಿವಾಹದ ದಿನ ಕೂಡ ದಂಪತಿ ಮತ್ತು ಪೋಷಕರು ಸರಿಯಾದ ಜೋಡಿಯನ್ನು ಮದುವೆಯಾಗುತ್ತಿದ್ದಾರೆಯೇ ಎಂದು ಅನೇಕ ಬಾರಿ ಪರೀಕ್ಷಿಸಿ ಕೊನೆಗೆ ಮದುವೆ ಮಾಡಿದ್ದರು.