ವಿದೇಶ

ಉಗ್ರ ಮಸೂದ್ ಅಜರ್ ರಕ್ಷಣೆ, ಚೀನಾ ನಿಲುವಿಗೆ ಸುಷ್ಮಾ ಸ್ವರಾಜ್ ತೀವ್ರ ಆಕ್ಷೇಪ

Lingaraj Badiger
ಮಾಸ್ಕೊ: ಮಾಸ್ಕೊದಲ್ಲಿ ನಡೆಯುತ್ತಿರುವ ರಷ್ಯಾ-ಭಾರತ-ಚೀನಾ (ಆರ್'ಐಸಿ) ತ್ರಿಪಕ್ಷೀಯ ಮಾತುಕತೆಯಲ್ಲಿ ಭಾಗವಹಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು, ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಹಾಗೂ ಪಠಾಣ್ ಕೋಟ್ ದಾಳಿಯ ಸೂತ್ರಧಾರ ಮಸೂದ್ ಅಜರ್ ವಿಷಯವನ್ನು ಬಲವಾಗಿ ಪ್ರಸ್ತಾಪಿಸಿದ್ದಾರೆ.
ಇಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಇ ಅವರ ಜೊತೆ ವಿಷಯ ಪ್ರಸ್ತಾಪಿಸಿದ ಸುಷ್ಮಾ ಸ್ವರಾಜ್, ಉಗ್ರ ಮಸೂದ್ ಅಜರ್ ನೇತೃತ್ವದ ಜೆಇಎಂ ಸಂಘಟನೆಯನ್ನು ನಿಷೇಧಿಸಲು ವಿಶ್ವಸಂಸ್ಥೆಯಲ್ಲಿ ಭಾರತ ನಡೆಸಿದ ಯತ್ನಕ್ಕೆ ಚೀನಾ ಅಡ್ಡಗಾಲು ಹಾಕಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ತ್ರಿರಾಷ್ಟ್ರ ಶೃಂಗಸಭೆಯ ಸಂದರ್ಭದಲ್ಲಿ ಚೀನಾ ಜೊತೆಗಿನ ದ್ವಿಪಕ್ಷೀಯ ಮಾತುಕತೆ ವೇಳೆ ಸುಷ್ಮಾ ಸ್ವರಾಜ್ ಅವರು ವಿಷಯವನ್ನು ಕೈಗೆತ್ತಿಕೊಂಡರು. ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಸುಷ್ಮಾ ಅವರು ಅಜರ್ ವಿಷಯವನ್ನು ಪ್ರಸ್ತಾಪಿಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರ ದಾಳಿಯ ಪ್ರಮುಖ ರೂವಾರಿಯಾಗಿರುವ ಅಜರ್ ಮಸೂದ್ ಸೇರಿದಂತೆ ಪಾಕಿಸ್ತಾನದ ಪ್ರಮುಖ ಉಗ್ರ ಮುಖಂಡರ ವಿರುದ್ಧ ದಿಗ್ಬಂಧನ  ವಿಧಿಸಬೇಕೆಂಬ ಭಾರತದ ಯತ್ನಕ್ಕೆ ಕಳೆದ ತಿಂಗಳು ಚೀನಾ ತನ್ನ ರಹಸ್ಯ ವೆಟೋ ಅಧಿಕಾರವನ್ನು ಬಳಕೆ ಮಾಡಿ ತಡೆ ಹಿಡಿದಿತ್ತು.
SCROLL FOR NEXT