ನವದೆಹಲಿ: ಇಸೀಸ್ ಗೆ ಭಾರತದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದ್ದ ಮೊಹಮ್ಮದ್ ಶಫಿ ಅರ್ಮಾರ್ ನನ್ನು ಅಮೆರಿಕ ಹತ್ಯೆ ಮಾಡಿರುವ ಬಗ್ಗೆ ಅಮೆರಿಕ ಅಧಿಕಾರಿಗಳು ಭಾರತದ ಎನ್ಐಎ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ತನಿಖಾ ತಂಡ ಮೊಹಮ್ಮದ್ ಶಫಿ ಅರ್ಮಾರ್ ನನ್ನು ಇಸೀಸ್ ಉಗ್ರ ಸಂಘಟನೆಗೆ ಭಾರತದಿಂದ ಉಗ್ರರನ್ನು ನೇಮಕ ಮಾಡುತ್ತಿದ್ದ ಮಾಸ್ಟರ್ ಮೈಂಡ್ ಎಂದು ಶಂಕಿಸಿತ್ತು. ಮೊಹಮ್ಮದ್ ಶಫಿ ಅರ್ಮಾರ್ ನನ್ನು ವೈಮಾನಿಕ ದಾಳಿ ಮೂಲಕ ಹತ್ಯೆ ಮಾಡಿರುವ ಬಗ್ಗೆ ಅಮೆರಿಕಾದಿಂದ ಮಾಹಿತಿ ಪಡೆದಿದ್ದೇವೆ, ಅರ್ಮಾರ್ ನ ಹತ್ಯೆ ಹಾಗೂ ಆತನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಮೇರಿಕಾದ ಅಧಿಕಾರಿಗಳಲ್ಲಿ ಕೇಳಿದ್ದೇವೆ ಎಂದು ಎನ್ ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರ್ನಾಟಕದ ಭಟ್ಕಳ ಮೂಲದ 26ರ ಹರೆಯದ ಮೊಹಮ್ಮದ್ ಶಫಿ ಅರ್ಮಾರ್ ಭಾರತದಲ್ಲಿ ಉಗ್ರ ಸಂಘಟನೆಯ ಸ್ಲೀಪರ್ ಸೆಲ್ ಗಳನ್ನು ರಚಿಸುವಲ್ಲಿ ಮತ್ತು ಉಗ್ರ ಸಂಘಟನೆಗೆ ಅಮಾಯಕ ಯುವಕರನ್ನು ಸೆಳೆಯುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದ. 26ರ ಹರೆಯದ ಮೊಹಮ್ಮದ್ ಶಫಿ ಯ ಅಣ್ಣ ಸುಲ್ತಾನ್ ಅರ್ಮಾರ್ ಕಳೆದ ವರ್ಷದ ತನಕವೂ ಭಾರತದಲ್ಲಿ ಐಸಿಸ್ ಸಂಘಟನೆಯ ನೇತೃತ್ವ ವಹಿಸಿ ದುಡಿಯುತ್ತಿದ್ದ. ಆತ 2015ರ ಮಾರ್ಚ್‌ನಲ್ಲಿ ಅಮೆರಿಕ ವಾಯು ಪಡೆಯ ವೈಮಾನಿಕ (ಡ್ರೋನ್) ದಾಳಿಯಲ್ಲಿ ಹತನಾಗಿದ್ದ.