ವಿದೇಶ

"ಬ್ಯಾಗ್ ಗಳನ್ನು ಬಿಟ್ಟು ಹೊರಗೆ ಜಿಗಿಯಿರಿ"; ಪ್ರಯಾಣಿಕರಿಗೆ ಸಿಬ್ಬಂದಿ ತುರ್ತು ಸಲಹೆ

Srinivasamurthy VN

ದುಬೈ: "ಬ್ಯಾಗ್ ಗಳನ್ನು ಬಿಟ್ಟು ಮೊದಲು ಹೊರಗೆ ಜಿಗಿಯಿರಿ, ಬಳಿಕ ಬ್ಯಾಗ್ ಗಳನ್ನು ತೆಗೆದುಕೊಂಡರಾಯಿತು" ಇದು ಬುಧವಾರ ದುಬೈ ವಿಮಾನ ನಿಲ್ದಾಣದಲ್ಲಿ ಬೆಂಕಿ ಅವಘಡಕ್ಕೀಡಾದ  ವಿಮಾನದ ಅಂತಿಮ ಕ್ಷಣದ ವಿಡಿಯೋ ತುಣುಕಿನ ಸಂಭಾಷಣೆಗಳು.

ಕೇರಳದ ತಿರುವನಂತಪುರದಿಂದ ದುಬೈಗೆ ಹೊರಟಿದ್ದ ಎಮಿರೇಟ್ಸ್ ವಿಮಾನ ಸಂಸ್ಥೆಗೆ ಸೇರಿದ ವಿಮಾನವು ದುಬೈನ ವಿಮಾನ ನಿಲ್ದಾಣದಲ್ಲಿ ಲ್ಯಾಡಿಂಗ್ ಆಗುವ ವೇಳೆ ಬೆಂಕಿ  ಅಪಘಾತಕ್ಕೀಡಾಗಿತ್ತು. ಬೆಂಕಿ ಕೆನ್ನಾಲಿಗೆ ಹೆಚ್ಚಾಗುತ್ತಿದ್ದಂತೆಯೇ ವಿಮಾನದಲ್ಲಿದ್ದ ಸಿಬ್ಬಂದಿ ಪ್ರಯಾಣಿಕರನ್ನು ಉದ್ದೇಶಿಸಿ, "ಕೂಡಲೇ ಹೊರಗೆ ಜಿಗಿದು ನಿಮ್ಮ ಪ್ರಾಣ ಉಳಿಸಿಕೊಳ್ಳಿ. ಬಳಿಕ ಬ್ಯಾಗ್  ಗಳನ್ನು ತೆಗೆದುಕೊಂಡರಾಯಿತು" ಎಂದು ಕೂಗುತ್ತಿರುವ ದೃಶ್ಯಾವಳಿ ಇದೀಗ ವೈರಲ್ ಆಗಿದೆ.

ವಿಮಾನದೊಳಗಿದ್ದ ಪ್ರಯಾಣಿಕರೊಬ್ಬರು ವಿಮಾನ ಅಪಘಾತಕ್ಕೀಡಾದ ಬಳಿಕ ಕೊನೇ ಕ್ಷಣದಲ್ಲಿ ಚಿತ್ರೀಕರಿಸಿರುವ ವಿಡಿಯೋ ಇದಾಗಿದ್ದು, ಅಂತಿಮ ಕ್ಷಣದಲ್ಲಿ ವಿಮಾನದೊಳಗೆ ಏನೇನಾಯಿತು  ಎಂಬುದನ್ನು ಚಿತ್ರೀಕರಿಸಿದ್ದಾರೆ. ಸುಮಾರು 2.09 ಸೆಕೆಂಡ್ ಗಳ ಅವಧಿಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅಂತೆಯೇ  ಇದೇ ವಿಡಿಯೋದ ಅಂತಿಮ ಭಾಗದಲ್ಲಿ ಅಪಘಾತಕ್ಕೀಡಾಗಿ ಬೆಂಕಿ ಕಾಣಿಸಿಕೊಂಡಿದ್ದ ಎಂಜಿನ್ ಕೂಡ ಚಿತ್ರದಲ್ಲಿ ಸೆರೆಯಾಗಿದೆ.

ನಿನ್ನೆಯಷ್ಟೇ ಸಿಬ್ಬಂದಿ ಸೇರಿ ಸುಮಾರು 300 ಮಂದಿ ಪ್ರಯಾಣಿಕರನ್ನು ಹೊತ್ತು ತಿರುವನಂತಪುರದಿಂದ ದುಬೈಗೆ ಹಾರಿದ್ದ ಎಮಿರೇಟ್ಸ್ ವಿಮಾನಸಂಸ್ಥೆಯ ಬೋಯಿಂಗ್ 777 ವಿಮಾನ  ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿತ್ತು. ಈ ವೇಳೆ ವಿಮಾನದ ಎಂಜಿನ್ ಗೆ ಬೆಂಕಿ ಹೊತ್ತು ವಿಮಾನ ಬೆಂಕಿಗಾಹುತಿಯಾಗಿತ್ತು. ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು  ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಪ್ರಯಾಣಿಕರನ್ನು ರಕ್ಷಿಸುವ ವೇಳೆ ಅಗ್ನಿ ಶಾಮಕ ದಳ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದ.

SCROLL FOR NEXT