ವಿದೇಶ

ಕ್ವೆಟ್ಟಾದಲ್ಲಿ ಆತ್ಮಾಹುತಿ ದಾಳಿ, 65 ಸಾವು: ದಾಳಿಗೆ ಭಾರತದ 'ರಾ' ಕಾರಣ ಎಂದ ಪಾಕ್

Lingaraj Badiger
ಕ್ವೆಟ್ಟಾ: ಪಾಕಿಸ್ತಾನದಲ್ಲಿ ಮತ್ತೆ ಉಗ್ರರು ಅಟ್ಟಾಹಾಸ ಮೆರೆದಿದ್ದು, ಸೋಮವಾರ ಬೆಳಗ್ಗೆ ಬಲೂಚಿಸ್ತಾನದ ಕ್ವೆಟ್ಟಾದಲ್ಲಿರುವ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಿಸಿದ್ದು, ಘಟನೆಯಲ್ಲಿ ಹಲವು ವಕೀಲರು ಸೇರಿದಂತೆ ಸುಮಾರು 65 ಮಂದಿ ಮೃತಪಟ್ಟಿದ್ದಾರೆ.
ಹತ್ಯೆಗಿಡಾದ ಬಲೋಚಿಸ್ತಾನ ವಕೀಲರ ಸಂಘದ ಅಧ್ಯಕ್ಷ ಹಾಗೂ ವಕೀಲ ಬಿಲಾಲ್ ಅನ್ವರ್ ಕಾಸಿ ಅವರ ಮೃತ ದೇಹದ ಬಳಿ ನೂರಾರು ವಕೀಲರು ಜಮಾಯಿಸಿದ್ದ ಸಂದರ್ಭದಲ್ಲಿ ಉಗ್ರನೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಬಲೋಚಿಸ್ತಾನ್ ಆರೋಗ್ಯ ಸಚಿವ ರೆಹಮತ್ ಬಲೋಚಿ ಅವರು ಹೇಳಿದ್ದಾರೆ.
ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 65ಕ್ಕೆ ಏರಿಕೆಯಾಗಿದೆ ಎಂದು ಆಸ್ಪತ್ರೆಯ ಅಧೀಕ್ಷಕರು ಖಚಿತಪಡಿಸಿರುವುದಾಗಿ ಎಆರ್ ವೈ ಸುದ್ದಿ ಚಾನಲ್ ವರದಿ ಮಾಡಿದೆ. ಘಟನೆ ನಡೆದ ಸ್ಥಳದಲ್ಲಿ ಎರಡು ಕಾಲುಗಳು ಪತ್ತೆಯಾಗಿದ್ದು, ಅವು ಆತ್ಮಾಹುತಿ ದಾಳಿ ಮಾಡಿದ ಉಗ್ರನ ಕಾಲಾಗಿರುಬಹುದು ಎಂದು ಸುದ್ದಿ ವಾಹಿನಿ ಹೇಳಿದೆ.
ಇನ್ನು ಉಗ್ರ ದಾಳಿಗೆ ಭಾರತೀಯ ಗುಪ್ತಚರ ಸಂಸ್ಥೆ ರಾ ಕಾರಣ ಎಂದು ಬಲೋಚಿಸ್ತಾನ ಮುಖ್ಯಮಂತ್ರಿ ಸನಾಉಲ್ಲಾ ಜಹ್ರಿ ಅವರು ಆರೋಪಿಸಿದ್ದಾರೆ. ಈ ಉಗ್ರ ದಾಳಿಗೆ ಯಾರ ಕಾರಣ ಎಂಬುದನ್ನು ಪೊಲೀಸರು ಹೇಳುವ ಮೊದಲೇ ಬಲೋಚಿಸ್ತಾನ ಸಿಎಂ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಈ ಭೀಕರ ಉಗ್ರ ದಾಳಿಯನ್ನು ಈ ವರೆಗೂ ಯಾವುದೇ ಉಗ್ರ ಸಂಘಟನೆ ಹೊತ್ತಿಲ್ಲವಾದರೂ, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರರು ಈ ಕೃತ್ಯ ನಡೆಸಿರಬಹುದು ಎಂದು  ಪೊಲೀಸರು ಶಂಕಿಸಿದ್ದಾರೆ.
SCROLL FOR NEXT