ದಾಳಿಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸುತ್ತಿರುವುದು.
ಕರಾಚಿ: ಪಾಕಿಸ್ತನದ ಕ್ವೆಟ್ಟಾದಲ್ಲಿ ನಡೆದ ಆತ್ಮಾಹುತಿ ದಾಳಿಯ ಹೊಣೆಯನ್ನು ತಾಲಿಬಾನ್ ಮತ್ತು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಪಡೆ ಹೊತ್ತುಕೊಂಡಿವೆ.ಪಾಕಿಸ್ತಾನದ ಬಲೋಚಿಸ್ತಾನ ಪ್ರಾಂತ್ಯದಲ್ಲಿ ಆಸ್ಪತ್ರೆಯೊಂದರ ಸಮೀಪ ಜನನಿಬಿಡ ಪ್ರದೇಶದಲ್ಲಿ ನಡೆಸಲಾದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ 75 ಮಂದಿ ಸಾವನ್ನಪ್ಪಿ, 115 ಮಂದಿ ಗಾಯಗೊಂಡಿದ್ದಾರೆ.
ನಿನ್ನೆ ಬೆಳಗ್ಗೆ ಗುಂಡಿನ ದಾಳಿಗೆ ಹತರಾಗಿದ್ದ ಖ್ಯಾತ ವಕೀಲ ಬಿಲಾಲ್ ಅನ್ವರ್ ಕಾಸಿಯ ಮೃತದೇಹವನ್ನು ಕ್ವೆಟ್ಟಾದಲ್ಲಿನ ಸರ್ಕಾರಿ ಆಸ್ಪತ್ರೆಗೆ ತರಲಾಗಿತ್ತು. ಅವರ ಹತ್ಯೆಯನ್ನು ಖಂಡಿಸಿ 200ಕ್ಕೂ ಹೆಚ್ಚು ಶೋಕತಪ್ತರು ಆಸ್ಪತ್ರೆಯ ಮುಂದೆ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಆತ್ಮಹತ್ಯಾ ದಾಳಿಕೋರ ಆಗಮಿಸಿ ಗುಂಡಿನ ದಾಳಿ ನಡೆಸಿದ್ದಾನೆ. ಬಿಲಾಲ್ ಅನ್ವರ್ ಕಾಸಿ ಬಲೋಚಿಸ್ತಾನ ವಕೀಲರ ಸಂಘದ ಅಧ್ಯಕ್ಷರಾಗಿದ್ದರು.
ದಾಳಿಯ ಹಿಂದೆ ತನ್ನ ಕೈವಾಡ ಕೂಡ ಇದೆ ಎಂದು ಇಸಿಸ್ ಇಂದು ಹೊಣೆ ಹೊತ್ತುಕೊಂಡಿದೆ.
ಇಸಿಸ್ ನ ಹುತಾತ್ಮ ಬಾಂಬರ್ ಕ್ವೆಟ್ಟಾ ನಗರದಲ್ಲಿ ಕಾನೂನು ಮತ್ತು ಪಾಕಿಸ್ತಾನಿ ಪೊಲೀಸ್ ಸಿಬ್ಬಂದಿಗಳನ್ನು ಒಳಗೊಂಡಿರುವ ಪ್ರದೇಶಕ್ಕೆ ಹೋಗಿ ತನ್ನ ಸ್ಫೋಟಕ ಬೆಲ್ಟ್ ನ್ನು ಸ್ಫೋಟಿಸಿದ ಎಂದು ಇಸಿಸ್ ಸಂಪರ್ಕ ಹೊಂದಿರುವ ಅಮಖ್ ಸುದ್ದಿ ಸಂಸ್ಥೆ ತಿಳಿಸಿದೆ.
ತಾಲಿಬಾನ್ ಉಗ್ರಗಾಮಿ ಪಡೆಯ ಬಣವಾದ ಜಮಾತುಲ್ ಅಹರರ್ ವಕ್ತಾರ, ತಮ್ಮ ಬಣ ದಾಳಿಯ ಹೊಣೆ ಹೊತ್ತುಕೊಂಡಿದ್ದು, ಪಾಕಿಸ್ತಾನದಲ್ಲಿ ಇಸ್ಲಾಮಿಕ್ ವ್ಯವಸ್ಥೆಯನ್ನು ಹೇರುವವರೆಗೆ ಇನ್ನಷ್ಟು ದಾಳಿ ನಡೆಸುವುದಾಗಿ ಹೇಳಿದೆ.
'' ತಾಲಿಬಾನ್ ಪಾಕಿಸ್ತಾನ ಜಮಾತ್ ಉರ್ ಅಹರ್ ದಾಳಿಯ ಹೊಣೆ ಹೊತ್ತುಕೊಂಡಿದ್ದು, ಮುಂದಿನ ದಿನಗಳಲ್ಲಿಯೂ ಇಂತಹ ದಾಳಿ ಮುಂದುವರಿಸಲಾಗುವುದು. ಈ ಬಗ್ಗೆ ಸದ್ಯದಲ್ಲಿಯೇ ವಿಡಿಯೋ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಸಂಘಟನೆ ವಕ್ತಾರ ಎಹ್ಸನುಲ್ಲಾ ಎಹ್ಸನ್ ಮಾಧ್ಯಮಗಳಿಗೆ ಕಳುಹಿಸಿದ ಇ-ಮೇಲ್ ನಲ್ಲಿ ಹೇಳಿದ್ದಾನೆ.
ಬಿಲಾಲ್ ಅನ್ವರ್ ಕಾಸಿ ಅವರ ಮೃತದೇಹವನ್ನು ಶವಪರೀಕ್ಷೆಗೆ ಕರೆತರುವ ವೇಳೆ ತುರ್ತು ಇಲಾಖೆಯಲ್ಲಿ ದೊಡ್ಡ ಬಾಂಬ್ ಸ್ಫೋಟ ಶಬ್ದ ಕೇಳಿಸಿತು. ಸದ್ದಿನ ನಂತರ ಗುಂಡಿನ ದಾಳಿ ನಡೆಯಿತು. 8 ಕಿಲೋ ಸ್ಫೋಟಕಗಳನ್ನು ಹೊತ್ತು ಆತ್ಮಹತ್ಯಾ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿ ನಡೆದ ಸ್ಥಳದಲ್ಲಿ ಯಾವುದೇ ವಸ್ತು ಪತ್ತೆಯಾಗಿಲ್ಲ. ದಾಳಿಕೋರ ತನ್ನ ಎದೆಯಲ್ಲಿ ಸ್ಫೋಟಕವನ್ನು ಇಟ್ಟುಕೊಂಡಿದ್ದಿರಬಹುದು ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.
ಪಾಕಿಸ್ತಾನದಲ್ಲಿ ಈ ವರ್ಷ ನಡೆದ ದಾಳಿಯಲ್ಲಿ ಇದು ಘೋರವಾಗಿದ್ದು, ಇದು ಆತ್ಮಹತ್ಯಾ ದಾಳಿಯೆಂದು ಬಾಂಬ್ ವಿಲೇವಾರಿ ದಳದ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ದಾಳಿ ನಡೆದ ಸ್ವಲ್ಪ ಹೊತ್ತಿಗೆ ಪ್ರಧಾನಿ ನವಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಫ್ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಈ ದಾಳಿಯನ್ನು ಪ್ರಧಾನಿ ನವಾಜ್ ಷರೀಫ್ ಮತ್ತು ಅಧ್ಯಕ್ಷ ಮಮ್ನೂನ್ ಹುಸೇನ್ ಬಲವಾಗಿ ಖಂಡಿಸಿದ್ದಾರೆ. ತಪ್ಪಿತಸ್ಥರನ್ನು ಬಂಧಿಸುವಂತೆ ಬಲೋಚಿಸ್ತಾನ ಸರ್ಕಾರಕ್ಕೆ ಪ್ರಧಾನಿ ಆದೇಶ ನೀಡಿದ್ದಾರೆ.