ವಿದೇಶ

ಢಾಕಾ ಕೆಫೆ ದಾಳಿ: 5 ಶಂಕಿತ ಉಗ್ರರ ಬಂಧನ

Srinivasamurthy VN

ಢಾಕಾ: ಢಾಕಾದ ಕೆಫೆಯಲ್ಲಿ ನಡೆದ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿ ಜಮಾತುಲ್ ಮುಜಾಹಿದೀನ್ ಬಾಂಗ್ಲಾದೇಶ್ ಉಗ್ರಗಾಮಿ  ಸಂಘಟನೆಗೆ ಸೇರಿದ ಐವರು ಉಗ್ರಗಾಮಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.

ಭಯೋತ್ಪಾದನಾ ನಿಗ್ರಹ ಘಟಕವು ಢಾಕಾದ ದಾರುಸ್ಸಲಾಂ ಪ್ರದೇಶದಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿ ಜಮಾತುಲ್ ಮುಜಾಹಿದೀನ್ ಉಗ್ರ ಸಂಘಟನೆಗೆ ಸೇರಿದ ಐವರು ಉಗ್ರರನ್ನು  ಬಂಧಿಸಿದೆ. ಈ ವೇಳೆ ಉಗ್ರರಿಂದ 875 ಗ್ರಾಂ ಮದ್ದುಗುಂಡು ಹಾಗೂ 25 ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಾಂಗ್ಲಾದೇಶ ಪೊಲೀಸ್ ವಕ್ತಾರರು ತಿಳಿಸಿದರು.

ಕಳೆದ ಜುಲೈ 1ರಂದು 17 ಮಂದಿ ವಿದೇಶೀಯರು ಸೇರಿದಂತೆ 22 ಜನರ ಸಾವಿಗೆ ಕಾರಣವಾಗಿದ್ದ ಢಾಕಾ ಕೆಫೆ ಬಾಂಬ್ ದಾಳಿಯಲ್ಲಿ ಪ್ರಸ್ತುತ ಬಂಧಿತರಾಗಿರುವ ಜಮಾತುಲ್ ಮುಜಾಹಿದೀನ್  ಬಾಂಗ್ಲಾದೇಶ್ ಉಗ್ರಗಾಮಿ ಸಂಘಟನೆ ಉಗ್ರರು ಸೇರಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಅಲ್ಲದೆ ಬಂಧಿತರೆಲ್ಲರೂ ಬಾಂಬ್ ತಯಾರಿಯಲ್ಲಿ ನಿಪುಣರಾಗಿದ್ದು, ಢಾಕಾದಲ್ಲಿ ಮತ್ತೊಂದು ಭಾರಿ  ವಿಧ್ವಂಸಕ ನಡೆಸಲು ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ. ಈ ಹಿನ್ನಲೆಯಲ್ಲಿ ಢಾಕಾದ ರಹಸ್ಯ ಪ್ರದೇಶದಲ್ಲಿ ಶಂಕಿತ ಉಗ್ರರ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

SCROLL FOR NEXT