ದಾಳಿ ನಡೆದ ಮದುವೆ ಪಾರ್ಟಿ ಕಟ್ಟಡದ ಹೊರ ಆವರಣ
ಇಸ್ತಾನ್ ಬುಲ್: ಟರ್ಕಿಯ ಆಗ್ನೇಯ ಭಾಗದಲ್ಲಿ ಕುರ್ದಿಶ್ ಸಮುದಾಯದ ಮದುವೆ ಪಾರ್ಟಿ ನಡೆಯುತ್ತಿದ್ದ ಕಟ್ಟಡದ ಹೊರಗೆ ಸಂಭವಿಸಿದ ಬಾಂಬ್ ಸ್ಫೋಟ ಇಸಿಸ್ ಗುಂಪಿನ ಆತ್ಮಹತ್ಯಾ ದಾಳಿಕೋರನಿಂದ ನಡೆದಿದೆ. ಸುಮಾರು 12 ವರ್ಷದ ಬಾಲಕ ಈ ದಾಳಿ ನಡೆಸಿದ್ದಾನೆ ಎಂದು ಟರ್ಕಿ ಅಧ್ಯಕ್ಷರು ತಿಳಿಸಿದ್ದಾರೆ.
ನಿನ್ನೆ ಸಾಯಂಕಾಲ ಸಿರಿಯಾ ಗಡಿಯಲ್ಲಿರುವ ಟರ್ಕಿಯ ಗಜಿಯಾನ್ ಟೆಪ್ ನಲ್ಲಿ ಆತ್ಮಹತ್ಯಾ ದಾಳಿ ನಡೆದಿದ್ದು, ಈ ವರ್ಷ ಟರ್ಕಿಯಲ್ಲಿ ನಡೆದ ಭೀಕರ ದಾಳಿ ಇದಾಗಿದೆ. ಇದರಲ್ಲಿ ಕನಿಷ್ಠ 51 ಮಂದಿ ಮೃತಪಟ್ಟಿದ್ದು, ಹತ್ತಾರು ಜನರಿಗೆ ಗಾಯವಾಗಿದೆ.
ಇಸ್ತಾನ್ ಬುಲ್ ಸಿಟಿ ಹಾಲ್ ಸಮೀಪ ರಾಷ್ಟ್ರೀಯ ವಾಹಿನಿಯೊಂದಕ್ಕೆ ಮಾತನಾಡಿದ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗನ್, 69 ಜನರಿಗೆ ಗಾಯವಾಗಿದ್ದು ಅವರಲ್ಲಿ 17 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಟರ್ಕಿ ಹಲವು ಉಗ್ರಗಾಮಿ ದಾಳಿಗೆ ಈಡಾಗಿದ್ದು, ನಿಷೇಧಿತ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ ಜೊತೆ ಸಂಪರ್ಕ ಹೊಂದಿರುವ ಕುರ್ದಿಸ್ ಉಗ್ರಗಾಮಿ ಪಡೆ ದಾಳಿಯ ಹೊಣೆ ಹೊತ್ತಿಕೊಂಡಿದೆ. ಕಳೆದ ಜೂನ್ ನಲ್ಲಿ ಇಸಿಸ್ ಶಂಕಿತ ಉಗ್ರಗಾಮಿಗಳು ಇಸ್ತಾನ್ ಬುಲ್ ಮುಖ್ಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿ ಅದರಲ್ಲಿ ಕನಿಷ್ಟ 44 ಮಂದಿ ಮೃತಪಟ್ಟಿದ್ದಾರೆ.ಕಳೆದ ವರ್ಷ ಅಕ್ಟೋಬರ್ ನಲ್ಲಿ ಟರ್ಕಿ ರಾಜಧಾನಿ ಅಂಕಾರಾದಲ್ಲಿ ನಡೆದ ಶಾಂತಿ, ಸೌಹಾರ್ದ ರ್ಯಾಲಿ ಮೇಲೆ ಇಸಿಸ್ ನಡೆಸಿದ ದಾಳಿಯಲ್ಲಿ 103 ಮಂದಿ ಮೃತಪಟ್ಟಿದ್ದರು.
ಇದಕ್ಕೂ ಮುನ್ನ ಮಾತನಾಡಿದ್ದ ಎರ್ದೊಗನ್, ಇಸಿಸ್, ಕುರ್ದಿಸ್ ಬಂಡುಕೋರರು ಮತ್ತು ಗುಲೆನ್ಸ್ ಚಳವಳಿ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ. ಮೂರೂ ಕೂಡ ಭಯೋತ್ಪಾದಕ ಸಂಘಟನೆಗಳು ಎಂದು ಹೇಳಿದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಬಹುದೊಡ್ಡ ಕ್ರೌರ್ಯ ಮತ್ತು ಒರಟುತನದ ಹತ್ಯಾಕಾಂಡ. ನಾವು ಎಲ್ಲಾ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಒಟ್ಟಾಗಿದ್ದೇವೆ. ಅವು ತಮ್ಮ ವಿಷದ ಬೀಜ ಬಿತ್ತಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.
ಟರ್ಕಿ ಪ್ರಧಾನಿ ಬಿನಲಿ ಯಿಲ್ದಿರಿಮ್ ದಾಳಿಯನ್ನು ಖಂಡಿಸಿದ್ದು, ಮದುವೆ ಸಮಾರಂಭ ಶೋಕಾಚರಣೆಯ ಸ್ಥಳವಾಗಿ ಮಾರ್ಪಟ್ಟಿತು. ಇದು ಮರುಕಳಿಸದಂತೆ ಎಲ್ಲರೂ ಒಟ್ಟಾಗಬೇಕೆಂದು ಹೇಳಿದ್ದಾರೆ.
ಟರ್ಕಿಯ ವಿರೋಧ ಪಕ್ಷಗಳು, ಬೇರೆ ರಾಷ್ಟ್ರಗಳು ಕೂಡ ಈ ಆತ್ಮಹತ್ಯಾ ಬಾಂಬ್ ದಾಳಿಯನ್ನು ತೀವ್ರವಾಗಿ ಖಂಡಿಸಿವೆ.