ವಾಷಿಂಗ್ಟನ್: ಪಾರ್ಕ್ ಗಳಲ್ಲಿ ನಗ್ನ ವಿಗ್ರಹಗಳ ಮೂಲಕ ಚರ್ಚೆಗೆ ಕಾರಣವಾಗಿದ್ದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಾಗೂ ಖ್ಯಾತ ಉದ್ಯಮಿ ಡೊನಾಲ್ಡ್ ಟ್ರಂಪ್ ಇದೀಗ ಮತ್ತೆ ಸುದ್ದಿಯಲ್ಲಿದ್ದು, ಅಮೆರಿಕದ ಪತ್ರಕರ್ತೆಯೊಬ್ಬರಿಗೆ ಬೆದರಿಕೆ ಹಾಕಿರುವ ಆರೋಪ ಎದುರಿಸುತ್ತಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ ಕುರಿತು ಅಮೆರಿಕದ ಸುದ್ದಿವಾಹಿನಿಯಿಂದ ಪ್ರಸಾರ ಮಾಡಿದ್ದ ಕಾರ್ಯಕ್ರಮವೊಂದರ ಕುರಿತಂತೆ ತೀವ್ರ ಗರಂ ಆಗಿರುವ ಟ್ರಂಪ್ ಕಾರ್ಯಕ್ರಮ ನಡೆಸಿಕೊಟ್ಟ ನಿರೂಪಕಿ ಹಾಗೂ ವರದಿಗಾರ್ತಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಕಾರ್ಯಕ್ರಮ ಪ್ರಸಾರವಾಗುತ್ತಿದ್ದಂತೆಯೇ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸರಣಿ ಟ್ವೀಟ್ ಗಳನ್ನು ಮಾಡಿರುವ ಟ್ರಂಪ್, "ಎಲ್ಲವೂ ಶಾಂತವಾದಾಗ ಒಂದು ದಿನ ಆಕೆಯ ವೈಯುಕ್ತಿಕ ಜೀವನದ ರಹಸ್ಯಗಳನ್ನು ಬಯಲು" ಮಾಡುವುದಾಗಿ ಹೇಳಿದ್ದಾರೆ.
ಎಂಎಸ್ ಎನ್ ಬಿಸಿ ಸುದ್ದಿಸಂಸ್ಥೆಯ ಮಾರ್ನಿಂಗ್ ಜೋ ಕಾರ್ಯಕ್ರಮದ ನಿರೂಪಕಿಯಾಗಿರುವ ಬ್ಜೆಜಿಂಸ್ಕಿ ಅವರಿಗೆ ಬೆದರಿಕೆ ಹಾಕಿದ್ದು, ಅದೇ ಕಾರ್ಯಕ್ರಮದ ಸಹ ನಿರೂಪಕ ಜೋ ಸ್ಕಾರ್ ಬೋರೋ ನಡುವಿನ ಬಹುಕಾಲದ ಸಂಬಂಧವನ್ನು ಬಹಿರಂಗಗೊಳಿಸುವುದಾಗಿ ಹೇಳಿದ್ದಾರೆ. ಅಂತೆಯೇ ತನ್ನ ಬಹುಕಾಲದ ಗೆಳತಿ ಬ್ಜೆಜಿಂಸ್ಕಿಯ ಕಾಟದಿಂದಾಗಿ ಜೋ ಸ್ಕಾರ್ ಬೋರೋ ಹೇಗೆ ನರಳುತ್ತಿದ್ದಾನೆ ಎಂಬುದನ್ನು ಬಹಿರಂಗಗೊಳಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಅಂತೆಯೇ ಕಾರ್ಯಕ್ರಮ ಪ್ರಸಾರವಾದ ಎಂಎಸ್ ಎನ್ ಬಿಸಿ ಸುದ್ದಿಸಂಸ್ಥೆಯ ವಿರುದ್ಧವೂ ಟ್ರಂಪ್ ಕಿಡಿಕಾರಿದ್ದು, ಮಾರ್ನಿಂಗ್ ಜೋ ನಂತಹ ಟಿಆರ್ ಪಿ ಹಾಗೂ ಸತ್ವವೇ ಇಲ್ಲದ ಕಾರ್ಯಕ್ರಮವನ್ನು ನೋಡಲು ನಿಜಕ್ಕೂ ಬೆಸರವಾಗುತ್ತದೆ. ನೋಡಲು ಅಸಾಧ್ಯವಾದ ಕಾರ್ಯಕ್ರಮವೇನಾದರೂ ಇದ್ದರೆ ಅದು ಖಂಡಿತಾ ಎಂಎಸ್ ಎನ್ ಬಿಸಿಯ ಮಾರ್ನಿಂಗ್ ಜೋ ಎಂದು ಕಿಡಿಕಾರಿದ್ದಾರೆ.
ಟ್ರಂಪ್ ಅವರ ಈ ಸರಣಿ ಟ್ವೀಟ್ ಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು, ಟ್ರಂಪ್ ಟ್ವೀಟ್ ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಅಂತೆಯೇ ಟ್ರಂಪ್ ಬೆಂಬಲಿಗರು ಸುದ್ದಿ ಸಂಸ್ಥೆ ವಿರುದ್ಧ ಕಿಡಿಕಾರಿದ್ದು, ಟ್ರಂಪ್ ಬೆಂಬಲಕ್ಕೆ ನಿಂತಿದ್ದಾರೆ.