ವಿದೇಶ

ಜರ್ಮನ್ ಚಾನ್ಸಲರ್ ಹತ್ಯೆ ಸಂಚು; ಪೊಲೀಸರ ಸಮಯ ಪ್ರಜ್ಞೆಯಿಂದ ಯತ್ನ ವಿಫಲ

Srinivasamurthy VN

ಪ್ರಾಗ್: ಜೆಕ್ ಗಣರಾಜ್ಯಕ್ಕೆ ಭೇಟಿ ನೀಡಿರುವ ಜರ್ಮನ್ ಚಾನ್ಸಿಲರ್ ಮೇಲಿನ ಹತ್ಯಾ ಸಂಚು ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ತಪ್ಪಿದ್ದು, ಅಧಿಕಾರಿಗಳ ಅರಿವಿಲ್ಲದಂತೆ ಭದ್ರತಾ  ಅಧಿಕಾರಿಗಳೊಂದಿಗೆ ಸೇರಿದ್ದ ದುಷ್ಕರ್ಮಿಯನ್ನು ಗುರುತಿಸಿ ಬಂಧಿಸಿದ್ದಾರೆ.

ಮೂಲಗಳ ಪ್ರಕಾರ ಜರ್ಮನ್ ಚಾನ್ಸಿಲರ್ ಎಂಜೆಲಾ ಮರ್ಕೆಲ್ ಅವರು ಜೆಕ್ ಗಣರಾಜ್ಯದ ಪ್ರಧಾನಿ ಬೊಹುಸ್ಲಾವ್ ಸಬೋಟ್ಕಾ ಅವರನ್ನು ಭೇಟಿ ಮಾಡಲು ಪ್ರಾಗ್ ಗೆ ಆಗಮಿಸಿದ್ದು,  ರಾಜಧಾನಿಯ ಪ್ರಮುಖ ಬೀದಿಯಲ್ಲಿ ಕುಲಪತಿಗಳ ಭದ್ರತಾ ಅಧಿಕಾರಿಗಳ ಸೋಗಿನಲ್ಲಿ ಬಂದ ದುಷ್ಕರ್ಮಿಯೊರ್ವನನ್ನು ಜೆಕ್ ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಈತ  ತಪ್ಪೊಪ್ಪಿಕೊಂಡಿದ್ದು, ಚಾನ್ಸಿಲರ್ ಎಂಜೆಲಾ ಮರ್ಕೆಲ್ ರನ್ನು ಕೊಲ್ಲಲ್ಲೆಂದೇ ತಾನು ಭದ್ರತಾ ಅಧಿಕಾರಿಗಳ ಸೋಗಿನಲ್ಲಿ ಬಂದಿರುವುದಾಗಿ ಹೇಳಿಕೊಂಡಿದ್ದಾನೆ.

ಪ್ರಾಗ್ ವಿಮಾನ ನಿಲ್ದಾಣದಿಂದ ಜರ್ಮನಿ ಚಾನ್ಸಿಲರ್ ಮರ್ಕೆಲ್ ಅವರು ಜೆಕ್ ಪ್ರಧಾನಿ ಬೊಹುಸ್ಲಾವ್ ಸಬೋಟ್ಕಾ ಅವರ ಕಚೇರಿಗೆ ತೆರಳುತ್ತಿದ್ದಾಗ ಅವರ ಕಪ್ಪು ಬಣ್ಣದ ಮರ್ಸಿಡೀಸ್ ಕಾರನ್ನು  ಭದ್ರತಾ ಅಧಿಕಾರಿಗಳ ಮೊಟಾರ್ ಬೈಕ್ ಗಳು ಸುತ್ತುವರೆದಿದ್ದವು. ಈ ವೇಳೆ ಭದ್ರತಾ ಅಧಿಕಾರಿಗಳ ಸೋಗಿನಲ್ಲಿ ಬಂದ ದುಷ್ಕರ್ಮಿ ದಿಢೀರನೇ ಅಧಿಕಾರಿಗಳ ತಂಡವನ್ನು ಸೇರಿಕೊಂಡಿದ್ದಾನೆ.  ಅಷ್ಟೂ ಘಟನೆಯನ್ನು ಪರಿಶೀಲಿಸುತ್ತಿದ್ದ ಜೆಕ್ ಪೊಲೀಸರು ಅನುಮಾನಗೊಂಡು ಆ ಶಂಕಿತ ವ್ಯಕ್ತಿಯನ್ನು ಹಿಂಬಾಲಿಸಿ ಹಿಡಿಯಲು ಪ್ರಯತ್ನಿಸಿದ್ದು, ಆತ ತಪ್ಪಿಸಿಕೊಳ್ಳಲು ಪ್ರಯತ್ನಿದ್ದಾನೆ.

ಬಳಿಕ ಆತನನ್ನು ಹಿಡಿದ ಪೊಲೀಸರು ವಿಚಾರಣೆಗೊಳಪಡಿಸಿದಾಗ ಪ್ರಕರಣ ಬಯಲಾಗಿದೆ. ಪ್ರಸ್ತುತ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.  ಘಟನೆ ಬಳಿಕ ಯೂರೋಪಿಯನ್ ದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

SCROLL FOR NEXT